ಕನ್ನಡಪ್ರಭ ವಾರ್ತೆ ಪಾವಗಡ
ಸರ್ವೇ ಹಾಗೂ ಗ್ರಾಮ ಲೆಕ್ಕಿಗ ಹಾಗೂ ತನಿಖಾಧಿಕಾರಿಗಳ ಕೈವಾಡದಿಂದ ಊರಲ್ಲಿ ವಾಸವಿಲ್ಲದ ವ್ಯಕ್ತಿಯೊಬ್ಬರ ಹೆಸರಿಗೆ ಸುಳ್ಳು ದಾಖಲೆ ಸೃಷ್ಟಿಸಿ ಜಮೀನು ವಂಚಿಸಲು ಮುಂದಾಗಿರುವ ವಿರುದ್ಧ ಅನ್ಯಾಯಕ್ಕೊಳಗಾದ ವಿಧವೆ ಮಹಿಳೆ ಹಾಗೂ ತಾಲೂಕು ರೈತ ಸಂಘ, ಇತರೆ ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ದಾಖಲೆ ಸಮೇತ ತಹಸೀಲ್ದಾರ್ ಸಂತೋಷ್‌ಕುಮಾರ್‌ಗೆ ಮನವಿ ಸಲ್ಲಿಸಿ, ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಿದರು.ತಾಲೂಕು ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ತಾಲೂಕಿನ ಕಸಬಾ ಹೋಬಳಿ ಕಿಲಾರ್ಲಹಳ್ಳಿ ಸರ್ವೇ ನಂಬರ್ 90/1ರಲ್ಲಿ 4 ಎಕರೆ ಜಮೀನನ್ನು1954ರಲ್ಲಿ ಮುದ್ದಪ್ಪ ಎಂಬುವರಿಂದ ಇದೇ ಗ್ರಾಮದ ಭೀಮಪ್ಪ ಕ್ರಯಕ್ಕೆ ಪಡೆದಿದ್ದಾರೆ. ಈ ಜಮೀನಿನ ಪಹಣಿಯಲ್ಲಿ ಮೊಮ್ಮಕ್ಕಳಾದ ಪದ್ಮಾವತಿ, ಮಂಜುಳಾ ಮತ್ತು ಸೊಸೆ ಪಾರ್ವತಮ್ಮ ಹೆಸರಿಗೆ ಜಂಟಿಯಾಗಿದೆ. ಈ ಮಹಿಳೆಯರೇ ಕಳೆದ 72 ವರ್ಷದಿಂದ ಭೂಮಿ ಉಳಿಮೆ ಮಾಡುತ್ತಿದ್ದಾರೆ ಎಂದರು.
ಪ್ರಸಕ್ತ ಸಾಲಿನ ಮೇ 13ರಂದು ಈ ಜಮೀನಿನ ತತ್ಕಾಲ್ ಪೊಡಿ ಮಾಡಿಸುವ ಹಿನ್ನೆಲೆಯಲ್ಲಿ ಪಟ್ಟಣದ ಸರ್ವೇ ಇಲಾಖೆಗೆ ತೆರಳಿದ್ದ ವೇಳೆ ದಾಖಲೆ ಪರಿಶೀಲನೆ ನಡೆಸಿದಾಗ ರಂಗಧಾಮಪ್ಪ ಎಂಬುವರ ಹೆಸರಿಗೆ ಜಮೀನಿನ ದಾಖಲೆ ತಿದ್ದುಪಡಿಯಾಗಿದೆ. ಸದರಿ ರಂಗದಾಮಪ್ಪ ಅನಧಿಕೃವಾಗಿ ತತ್ಕಾಲ್ ಪೊಡಿಗೆ ಅರ್ಜಿ ಸಲ್ಲಿಸಿದ್ದು, ಸ್ಕೆಚ್ ಪಹಣಿ ಭೂಮಿ ತಂತ್ರಾಂಶದ ಹಂತಕ್ಕೆ ತಲುಪಿಸಿದ್ದಾರೆ. ಇವರ ಹೆಸರಿಗೆ ಸುಳ್ಳು ದಾಖಲೆ ಸೃಷ್ಟಿಸುವಲ್ಲಿ ತಾಲೂಕಿನ ಭೂಮಾಪಕ ಎಸ್.ಜೆ.ಮಂಜುನಾಥ್ ಕಾನೂನು ಉಲ್ಲಂಘಿಸಿದ್ದು, ನಿಯಮದ ಪ್ರಕಾರ ಅಕ್ಕಪಕ್ಕದ ಹಾಗೂ ಅನುಭವದಲ್ಲಿರುವ ಜಮೀನುದಾರರಿಗೆ ಯಾವುದೇ ನೋಟಿಸ್ ನೀಡದೇ ರಂಗದಾಮಪ್ಪನಿಗೆ ಜಮೀನಿನ ದಾಖಲೆ ಸೃಷ್ಟಿಗೆ ಸಹಕರಿಸಿದ್ದಾರೆ ಎಂದು ಆರೋಪಿಸಿದರು.ಸರ್ವೇಯರ್ ಮಂಜುನಾಥ್ ಹಣದ ಆಸೆಗೆ ಬಡ ಮಹಿಳೆಯರಿಗೆ ವಂಚಿಸಿ ಈ ರೀತಿ ಅನ್ಯಾಯವೆಸಗಿರುವುದು ಎಷ್ಟರ ಮಟ್ಟಿಗೆ ಸರಿ. ಅಲ್ಲದೇ ನಕಲಿ ದಾಖಲೆ ಸೃಷ್ಟಿಸುವಲ್ಲಿ ನಿರತರಾದ ಗ್ರಾಮ ಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಕೆ. ತಿಪ್ಪೇಸ್ವಾಮಿ ಮಾತನಾಡಿ, ತಪ್ಪಿತಸ್ಥ ಸರ್ವೇಯರ್ ಮಂಜುನಾಥ ವಿರುದ್ಧ ಕಾನೂನು ಕ್ರಮ ಜರುಗಿಸಿ, ಪರವಾನಗಿ ರದ್ದುಪಡಿಸಬೇಕು. ಸರ್ವೇ ಕಾರ್ಯದ ನಕ್ಷೆಯನ್ನು ವಜಾಗೊಳಿಸಿ, ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದರು.ನೊಂದ ವಿಧವಾ ಮಹಿಳೆಯರಾದ ಪದ್ಮಾವತಿ, ಮಂಜಮ್ಮ, ಪಾರ್ವತಮ್ಮ ಮಾತನಾಡಿ, ತಾಲೂಕಿನ ಕಿರ್ಲಾಲಹಳ್ಳಿಯ ಗ್ರಾಮದಲ್ಲಿ ವಾಸವಿಲ್ಲ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ನಾವು ಗ್ರಾಮದಲ್ಲಿಯೇ ವಾಸವಿದ್ದೇವೆ. ಕೂಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ನಮ್ಮ ವಿರೋಧಿಗಳಿಂದ ಗ್ರಾಮದಲ್ಲಿಲ್ಲ ಎಂಬುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿ ನಮಗೆ ಮೋಸ ಮಾಡಲು ಮುಂದಾಗಿದ್ದಾರೆ ಎಂದರು.
ಗ್ರಾಮದಲ್ಲೇ ವಾಸವಿಲ್ಲದೇ ರಂಗಧಾಮಪ್ಪ ಎಂಬುವರ ಹೆಸರಿಗೆ ಜಮೀನಿನ ದಾಖಲೆ ಸೃಷ್ಟಿಸಿದ್ದಾರೆ. ಈಗ ಗೊತ್ತಿಲ್ಲದ ವ್ಯಕ್ತಿಯ ಹೆಸರಿಗೆ ಜಮೀನಿನ ಸ್ಕೆಚ್ ಮಾಡಲು ಮುಂದಾಗಿರುವುದು ಅತ್ಯಂತ ನೋವು ತಂದಿದೆ. ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಅಲಳು ತೋಡಿಕೊಂಡರು. ತಾಲೂಕು ಡಿಎಸ್‌ಎಸ್ ಸಂಚಾಲಕ ಬಿ.ಪಿ.ಪೆದ್ದನ್ನ, ಸಮಾಜ ಸೇವಕ ಕಿಲಾರ್ಲಹಳ್ಳಿ ಕೆ.ಎಂ.ಮೈಲಾರಪ್ಪ, ಎಚ್.ನಾಗರಾಜು, ಮುರುಳಿ, ಟೈಲರ್ ಗೋವಿಂದಪ್ಪ, ತಾಳೇಮರದಹಳ್ಳಿ ಗೋವಿಂದಪ್ಪ, ಹನುಮಂತರಾಯಪ್ಪ, ತಿಪ್ಪೇಸ್ವಾಮಿ, ನಾಗರಾಜಪ್ಪ, ತಿಮ್ಮಾನಾಯ್ಕ, ಈರಣ್ಣ, ಹನುಮಂತರಾಯಪ್ಪ ಹಾಗೂ ರೈತ ಸಂಘದ ಪದಾಧಿಕಾರಿ ಕರಿಯಣ್ಣ, ನರಸಣ್ಣ, ರಾಮಾಂಜನೇಯ, ಸಿದ್ದಪ್ಪ, ಲಕ್ಷ್ಮಾನಾಯ್ಕ, ಪರಸುನಾಯ್ಕ, ನಡಪನ್ನ, ರಮೇಶ್, ಪೂಜಾರ್ ಚಿತ್ತಯ್ಯ ಇದ್ದರು.ದಾಖಲೆ ಪರಿಶೀಲಿಸಿದ ಬಳಿಕ ಸರ್ವೇ ನಕ್ಷೆ ಹಾಗೂ ಪಹಣಿಯನ್ನು ರದ್ದು ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ಕೊಡಿಸಲಾಗುವುದು. -ಸಂತೋಷ್‌ಕುಮಾರ್, ತಹಸೀಲ್ದಾರ್