ಅನಧಿಕೃತ ಕಟ್ಟಡದ ಬಗ್ಗೆ ಕ್ರಮ ಕೈಗೊಳ್ಳಿ

KannadaprabhaNewsNetwork |  
Published : Oct 26, 2023, 01:00 AM IST
ಫೋಟೊ: ೨೫ಎಚ್‌ಎನ್‌ಎಲ್೨ | Kannada Prabha

ಸಾರಾಂಶ

ಪುರಸಭೆ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡಗಳ ವಿಷಯ ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸದ್ದು ಮಾಡಿದ್ದು, ಅಗತ್ಯ ಕ್ರಮಕ್ಕೆ ಶಾಸಕ ಶ್ರೀನಿವಾಸ ಮಾನೆ ಪುರಸಭೆ ಮುಖ್ಯಾಧಿಕಾರಿ ಜಗದೀಶ ಅವರಿಗೆ ಸೂಚಿಸಿದರು.

ಪುರಸಭೆ ಮುಖ್ಯಾಧಿಕಾರಿಗೆ ಶಾಸಕ ಶ್ರೀನಿವಾಸ ಮಾನೆ ಸೂಚನೆ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಪುರಸಭೆ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡಗಳ ವಿಷಯ ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸದ್ದು ಮಾಡಿದ್ದು, ಅಗತ್ಯ ಕ್ರಮಕ್ಕೆ ಶಾಸಕ ಶ್ರೀನಿವಾಸ ಮಾನೆ ಪುರಸಭೆ ಮುಖ್ಯಾಧಿಕಾರಿ ಜಗದೀಶ ಅವರಿಗೆ ಸೂಚಿಸಿದರು.

ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮಾನೆ, ಪೂರ್ವಾನುಮತಿ ಪಡೆಯದೇ ಅನಧಿಕೃತವಾಗಿ ಕಟ್ಟಡ ನಿರ್ಮಿಸಲಾಗಿದೆ. ಅಂಥ ಕೆಲವು ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದು, ತಕ್ಷಣವೇ ಕ್ರಮ ಕೈಗೊಳ್ಳಿ ಎಂದರು.

ತಾಂತ್ರಿಕ ದೋಷದ ಕಾರಣಗಳಿಂದ ತಾಲೂಕಿನಲ್ಲಿ ಪ್ರಮುಖ ನೀರಾವರಿ ಯೋಜನೆಗಳಿಗೆ ಗ್ರಹಣ ಹಿಡಿದಂತಾಗಿದೆ. ಇದರಿಂದ ಕೆರೆ, ಕಟ್ಟೆಗಳಿಗೆ ಕೃಷಿ ಭೂಮಿಗೆ ನೀರು ಹರಿಸುವುದು ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಎಚ್ಚರಿಸಿದ ಅವರು, ಬಾಳಂಬೀಡ ಮತ್ತು ಹಿರೇಕಾಂಶಿ ಏತ ನೀರಾವರಿ ಯೋಜನೆಗಳ ಪ್ರಾಯೋಗಿಕ ಪರೀಕ್ಷೆಗೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಕೆಲವು ಮಾತ್ರ ಬಂದ್ ಆಗಿವೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ಚಿದಂಬರ ಹಾವನೂರ ಗಮನ ಸೆಳೆದಾಗ, ಪ್ರತಿಕ್ರಿಯಿಸಿದ ಶಾಸಕ ಶ್ರೀನಿವಾಸ ಮಾನೆ, ಕೆಲವು ಘಟಕಗಳು ಮಾತ್ರ ಸುಸ್ಥಿತಿಯಲ್ಲಿದ್ದು, ಬಾಕಿ ಎಲ್ಲವೂ ಬಂದ್ ಆಗಿವೆ. ಕೆಳ ಹಂತದ ಸಿಬ್ಬಂದಿ ಮಾತು ಕೇಳಿ ವಿವರ ನೀಡುವ ಬದಲಿಗೆ ಖುದ್ದಾಗಿ ಭೇಟಿ ನೀಡಿ, ಮಾಹಿತಿ ನೀಡಿ ಎಂದು ಸೂಚಿಸಿದರು.

ಹಾನಗಲ್ ನಗರದ ಮುಖ್ಯ ರಸ್ತೆ ಹಾಳಾಗಿದ್ದು, ಸಂಚಾರಕ್ಕೆ ಪ್ರಯಾಸ ಅನುಭವಿಸುವಂತಾಗಿದೆ. ರಸ್ತೆ ಸುಧಾರಣೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕಿದ್ದು, ಯುದ್ದೋಪಾದಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ. ನಿರ್ಲಕ್ಷ್ಯ ಮಾಡದಂತೆ ಲೋಕೋಪಯೋಗಿ ಇಲಾಖೆಯ ಎಇಇ ನಾಗರಾಜ ಅವರಿಗೆ ಸೂಚಿಸಿದರು.

ಹೊಂಕಣ, ಮಾರನಬೀಡ ಸೇರಿದಂತೆ ತಾಲೂಕಿನ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಕ್ರಮ ಮದ್ಯದ ಮಾರಾಟ ಮಿತಿ ಮೀರಿದೆ. ಮಹಿಳಾ ಸಂಘಟನೆಗಳ ಸಹಕಾರ ಪಡೆದು, ಅಕ್ರಮ ಮದ್ಯದ ಮಾರಾಟಕ್ಕೆ ಬ್ರೇಕ್ ಹಾಕಿ. ದಿಢೀರ್ ದಾಳಿ ಮಾಡಿ ಕ್ರಮ ಜರುಗಿಸಿ ಎಂದು ಅಬಕಾರಿ ಇಲಾಖೆಯ ಉಪ ನಿರೀಕ್ಷಕಿ ಸವಿತಾ ಆರ್.ಟಿ. ಅವರಿಗೆ ಮಾನೆ ಸೂಚಿಸಿದರು.

ವಿದ್ಯುತ್ ಅಭಾವ ಈಗಲೇ ತಲೆದೋರಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ವಿದ್ಯುತ್ ಉಳಿತಾಯದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಿ, ಪೋಲಾಗುವುದನ್ನು ತಡೆಗಟ್ಟಿರಿ. ಕನಿಷ್ಠ ನೂರು ಗ್ರಾಮಗಳಲ್ಲಿ ಹಗಲು ಹೊತ್ತಿನಲ್ಲಿ ಬೀದಿ ದೀಪ ಉರಿಯುತ್ತಿದ್ದು, ಇದಕ್ಕೆಲ್ಲ ಕಡಿವಾಣ ಹಾಕಿ ಎಂದು ಹೆಸ್ಕಾಂ ಎಇಇ ಆನಂದಗೆ ನಿರ್ದೇಶನ ನೀಡಿದರು.

ಹಲವು ಶಾಲೆಗಳ ಮಕ್ಕಳು ಶೂ, ಸಾಕ್ಸ್ ಧರಿಸುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕು. ಕಳೆದ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಮ್ಮ ತಾಲೂಕು ಜಿಲ್ಲೆಗೆ ನಾಲ್ಕನೇ ಸ್ಥಾನದಲ್ಲಿದ್ದು, ಸುಧಾರಣೆಗೆ ವಿಶೇಷ ಕ್ರಮ ಕೈಗೊಳ್ಳಿ ಎಂದು ಬಿಇಒ ವಿ.ವಿ. ಸಾಲಿಮಠಗೆ ಸೂಚಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಸ್ವಂತ ನಿವೇಶನ ಇದ್ದರೆ ಅಲ್ಲಿಯೇ ಕಟ್ಟಡ ನಿರ್ಮಿಸಿ, ಇಲ್ಲದಿದ್ದರೆ ಸರ್ಕಾರಿ ಶಾಲೆಗಳ ಆವರಣದಲ್ಲಿ ನಿರ್ಮಿಸಬೇಕು. ಸ್ವಂತ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಯಾರಾದರೂ ಅಡ್ಡಿಪಡಿಸಿದರೆ ಪೊಲೀಸರ ಸುರಕ್ಷತೆಯೊಂದಿಗೆ ಕಟ್ಟಡ ನಿರ್ಮಿಸುವಂತೆ ಸಿಡಿಪಿಒಗೆ ಸೂಚಿಸಿದರು.

ಕೆರೆ, ಕಟ್ಟೆ, ಶಾಲೆ ಸೇರಿದಂತೆ ಸರ್ಕಾರಿ ನಿವೇಶನಗಳು ಒತ್ತುವರಿಗೆ ಒಳಗಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ, ಒಂದು ವಾರದೊಳಗೆ ಸಮಗ್ರ ವರದಿ ಸಲ್ಲಿಸಿ ಎಂದು ತಹಸೀಲ್ದಾರ್ ರವಿಕುಮಾರ ಕೊರವರಗೆ ಶಾಸಕ ಮಾನೆ ಸೂಚಿಸಿದರು.

ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಎಸ್.ವಿ. ಸಂತ್ರಿ, ಇಒ ದೇವರಾಜ ಎಲ್., ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಹನುಮಂತಪ್ಪ ಗೊಂದಿ ಇತರರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ