ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಮಂಗಳವಾರ ರಾತ್ರಿ ಜಿಲ್ಲೆಯಲ್ಲಿ ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುರ್ತು ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಹೇಮಾವತಿ ನಾಲೆ ನೀರನ್ನು ಅಕ್ರಮವಾಗಿ ಡಿಸೇಲ್ ಪಂಪ್‌ನಿಂದ ಬಳಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಕ್ರಮವಾಗಿ ಬಳಸಿಕೊಳ್ಳುವವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ತಹಸೀಲ್ದಾರರಿಗೆ ನಿರ್ದೇಶನ ನೀಡಿದರು.
ಕುಡಿಯುವ ನೀರಿಗಾಗಿ ಮಾತ್ರ ನಾಲೆ ನೀರನ್ನು ಬಳಸಿಕೊಳ್ಳಬೇಕು. ಕೃಷಿ ಮತ್ತಿತರ ಚಟುವಟಿಕೆಗಳಿಗೆ ಅಕ್ರಮವಾಗಿ ಬಳಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಾಲೆ ನೀರನ್ನು ಶುದ್ಧೀಕರಿಸಿದ ನಂತರ ಜನರಿಗೆ ಪೂರೈಕೆ ಮಾಡುವ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ ಕುಡಿಯಲು ಯೋಗ್ಯವಿದ್ದರೆ ಮಾತ್ರ ಪೂರೈಕೆ ಮಾಡಬೇಕೆಂದು ನಿರ್ದೇಶನ ನೀಡಿದರು.ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ವೀಕೃತ ವಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಬಾಕಿ ಉಳಿಸಿಕೊಳ್ಳದೆ ಕೂಡಲೇ ವಿಲೇವಾರಿ ಮಾಡಬೇಕು. ಚೆಕ್ ಪೋಸ್ಟ್‌ಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಪತ್ತೆ ಕಾರ್ಯಾಚರಣೆಯನ್ನು ಚುರುಕುಗೊಳಿಸಬೇಕು. ಚುನಾವಣಾ ಅಕ್ರಮ ತಡೆಯಲು ಸ್ಥಾಪಿಸಿರುವ ಪೋಸ್ಟ್‌ಗಳಲ್ಲಿ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯ ಗಳನ್ನು ಕಲ್ಪಿಸಬೇಕು ಎಂದರಲ್ಲದೆ ಲೋಕಸಭಾ ಕ್ಷೇತ್ರ ಚುನವಾಣೆಗೆ ಸಂಬಂಧಿಸಿದಂತೆ ಅಂಚೆ ಮತದಾನ ಮಾಡಲಿಚ್ಛಿಸುವ ಜಿಲ್ಲೆಯ ೮೫+ ಹಾಗೂ ವಿಕಲಚೇತನರಿಗೆ ನಮೂನೆ ೧೨ಡಿಯನ್ನು ವಿತರಿಸುವ ಕಾರ್ಯವನ್ನು ಪ್ರಾರಂಭಿಸಬೇಕು ಎಂದು ತಿಳಿಸಿದರು.
ಹೊಸದಾಗಿ ಕೊಳವೆ ಬಾವಿ ಕೊರೆಯುವ ಮುನ್ನ ಸಮಿತಿಯಿಂದ ಅನುಮೋದನೆ ಪಡೆಯಬೇಕು. ಅನುಮತಿಯಿಲ್ಲದೆ ಏಕಾಏಕಿ ಕೊರೆಸುವ ಕೊಳವೆ ಬಾವಿಗೆ ತಗಲುವ ವೆಚ್ಚದ ಬಿಲ್ಲಿನ ಪಾವತಿಗೆ ಅವಕಾಶ ನೀಡುವುದಿಲ್ಲ ಎಂದರಲ್ಲದೆ ಅನುಮೋದನೆ ಪಡೆಯದೆ ಕೊರೆದ ಬೋರ್‌ವೆಲ್‌ಗಳ ವೆಚ್ಚವನ್ನು ಅಧಿಕಾರಿಗಳ ವೇತನದಿಂದಲೇ ಕಟಾಯಿಸಲು ಕ್ರಮ ಕೈಗೊಳ್ಳಲಾಗುವುದೆಂದರು. ತೀವ್ರತರ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಕೊರೆಯಲಾಗಿರುವ ಹೊಸ ಕೊಳವೆ ಬಾವಿಗಳಿಗೆ ಬತ್ತಿ ಹೋಗಿರುವ ಕೊಳವೆ ಬಾವಿಗಳ ಪಂಪು ಮೋಟಾರ್‌ಗಳನ್ನೇ ಬಳಸಬೇಕು. ಮತ್ತೊಮ್ಮೆ ಹೊಸ ಪಂಪು ಮೋಟಾರ್ ಅಳವಡಿಸಿದರೆ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ರವೀಶ್ ಮಾತನಾಡಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 121 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದ್ದು, ಈ ಪೈಕಿ ೧೪ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಹಾಗೂ 31 ಗ್ರಾಮಗಳಲ್ಲಿ ಬಾಡಿಗೆ ಆಧಾರದ ಮೇಲೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿನ ತೀವ್ರತರ ಸಮಸ್ಯೆ ಕಂಡು ಬಂದಿರುವ ಗ್ರಾಮಗಳಲ್ಲಿ ಹೊಸದಾಗಿ 60 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಎಂದು ಮಾಹಿತಿ ನೀಡಿದರು.
-------------------ಸಮಸ್ಯೆ ತಲೆದೋರದಂತೆ ಕಾರ್ಯನಿರ್ವಹಿಸಿ
ಬೇಸಿಗೆ ಮುಗಿಯುವವರೆಗೂ ನೀರಿನ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳ ಅಂದಾಜು ಪಟ್ಟಿ ಸಿದ್ಧಪಡಿಸಬೇಕು. ತೀವ್ರ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಕೂಡಲೇ ಹೊಸ ಕೊಳವೆ ಬಾವಿ ಕೊರೆಸಲು ಮುಂದಾಗಬೇಕು. ಹೊಸದಾಗಿ ಕೊರೆದ ಕೊಳವೆ ಬಾವಿಗಳನ್ನು ಹಾಗೆ ಬಿಡದೆ ತತ್‌ಕ್ಷಣವೇ ವಿದ್ಯುದ್ದೀಕರಣಗೊಳಿಸಿ ಪಂಪು-ಮೋಟಾರು, ಪೈಪ್‌ಲೈನ್ ಅಳವಡಿಸ ಬೇಕು. ಸಂಬಂಧಿಸಿದ ತಹಸೀಲ್ದಾರರು, ಕಂದಾಯ ನಿರೀಕ್ಷಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಹಾಗೂ ಜಾನುವಾರು ಮೇವಿನ ಸಮಸ್ಯಾತ್ಮಕ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಡಿಸಿ ಸೂಚನೆ ನೀಡಿದರು. ---------------------
ಜಿ. ಪ್ರಭು, ಜಿಲ್ಲಾ ಪಂಚಾಯತಿ ಸಿಇಒ