ಕೊಪ್ಪಳ: ಶ್ರೀಕ್ಷೇತ್ರ ಹುಲಿಗಿಯ ಶ್ರೀಹುಲಿಗೆಮ್ಮದೇವಿ ದೇವಸ್ಥಾನದ 2026ರ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪ್ರಾಣಿ ಬಲಿ ಮತ್ತು ಮದ್ಯಪಾನ ನಿಷೇಧಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪ್ರಾಣಿ ಬಲಿ ನಿಷೇಧಗೊಳಿಸಲು ಧ್ವನಿವರ್ಧಕಗಳ ಮತ್ತು ಸೂಚನಾ ಫಲಕಗಳ ಮುಖಾಂತರ ಜಾಗೃತಿ ಮೂಡಿಸಲು ಮತ್ತು ವ್ಯಾಪಕ ಪ್ರಚಾರಕ್ಕೆ ಅಗತ್ಯ ಕೈಗೊಳ್ಳಬೇಕು. ಭಕ್ತರು ದೇವಸ್ಥಾನದ ಒಳಗಡೆ ಯಾವುದೇ ಪ್ರಾಣಿ ತರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಪೊಲೀಸ್ ಉಪ ಅಧೀಕ್ಷಕರು, ತಹಸೀಲ್ದಾರರು, ಮುನಿರಾಬಾದ್ ಪೊಲೀಸ್ ಠಾಣೆಯ ಆರಕ್ಷಕ ಠಾಣೆಯ ಆರಕ್ಷಕ ಉಪನಿರೀಕ್ಷಕರು, ಕೊಪ್ಪಳ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಹಾಗೂ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ಮದ್ಯಪಾನ ನಿಷೇಧ: ಜಾತ್ರಾ ಅವಧಿಯಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಮಧ್ಯಪಾನ ಮಾಡಿ ಪಾನಮತ್ತರಾಗಿ ಕ್ಷೇತ್ರದಲ್ಲಿ ಗಲಾಟೆ ಮಾಡುವ ಸಾಧ್ಯತೆ ಇರುವುದರಿಂದ ಉಳಿದ ಎಲ್ಲ ಭಕ್ತರಿಗೆ ತೊಂದರೆಯಾಗುವುದರಿಂದ ಹಾಗೂ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಮಧ್ಯಪಾನ ನಿಷೇಧ ಮಾಡುವ ಬಗ್ಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಹಾಜರಿದ್ದ ಕೊಪ್ಪಳ ಅಬಕಾರಿ ಇಲಾಖೆಯ ಉಪ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿ ಅಲ್ಲದೇ ಹುಲಿಗಿ ಕ್ಷೇತ್ರದಲ್ಲಿರುವ ಮದ್ಯಪಾನ ಮಾರಾಟ ಅಂಗಡಿಗಳನ್ನು ಮಹಾರಥೋತ್ಸವದ ದಿನದಂದು ಹುಲಿಗಿ, ಹೊಸಳ್ಳಿ, ಸಿಂಗಾಪೂರ, ಹಿಟ್ನಾಟ್ ಗ್ರಾಮಗಳಲ್ಲಿ ಮದ್ಯಪಾನ ಮಾರಾಟ ನಿಷೇಧ ಮಾಡುವ ಬಗ್ಗೆ ಅಬಕಾರಿ ಇಲಾಖೆ ಸೂಕ್ತ ಆದೇಶ ಹೊರಡಿಸುವಂತೆ ತಿಳಿಸಿದರು.