ಕುಶಾಲನಗರ ಪುರಸಭೆ ಸಾಮಾನ್ಯ ಸಭೆ । ವಿವಿಧ ಸಮಸ್ಯೆಗಳ ಚರ್ಚೆ
ಪುರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮೀ ಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡ ಶಾಸಕರು ಮಾತನಾಡಿ, ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಮುಖ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯ ಕಲಿಮುಲ್ಲಾ ಮಾತನಾಡಿ, ಸಾಯಿ ಬಡಾವಣೆಗೆ ಹೋಗುವ ರಸ್ತೆ ಬಳಿ ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಖಾಸಗಿ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರಿದರು.ಪಟ್ಟಣದ ಒಳಚರಂಡಿ ಕಾಮಗಾರಿಯ ಲೋಪದೋಷ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯುಜಿಡಿ ಕಾಮಗಾರಿ ವಸ್ತುಸ್ಥಿತಿ ಏನು ಯಾವಾಗ ನೀವು ಪೂರ್ಣಗೊಳಿಸುತ್ತಿರಿ ಎಂದು ಶಾಸಕರು ಜಲಮಂಡಳಿ ಕಾರ್ಯಪಾಲಕ ಎಂಜಿನಿಯರ್ ಉಮೇಶ್ ಕುಮಾರ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ ಕುಮಾರ್ ಅವರನ್ನು ಪ್ರಶ್ನಿಸಿದಾಗ, ಈಗಾಗಲೇ ಬಹುತೇಕ ಕಾಮಗಾರಿ ಮುಗಿದಿದೆ, ಪ್ರತಿ ಮನೆಗಳಿಗೆ ಸಂಪರ್ಕ ಹಾಗೂ ನಿರ್ವಹಣೆ ಮಾಡಬೇಕಾಗಿದೆ. ಇದಕ್ಕಾಗಿ ಮೂರು ತಿಂಗಳಿಗೆ 12 ಲಕ್ಷ ರು. ಹಣವನ್ನು ಪುರಸಭೆ ಒದಗಿಸಿಕೊಡಬೇಕು ಎಂದರು.
ಸದಸ್ಯ ಡಿ.ಕೆ.ತಿಮ್ಮಪ್ಪ ಮಾತನಾಡಿ, ಯೋಜನೆ ಕಾಮಗಾರಿ ಸರಿಯಾಗಿ ಮಾಡಿಲ್ಲ. ಸರ್ಕಾರದ ಹಣ ಪೋಲು ಅಗಿದೆ. ಈಗ ಆಗಿರುವ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು ಎಂದು ಈ ಹಿಂದೆಯೇ ನಿರ್ಣಯ ಕೂಡ ಮಾಡಲಾಗಿದೆ ಎಂದು ಹೇಳಿದರು.
ಉದ್ಯಾನವನಗಳ ಅಭಿವೃದ್ಧಿ, ಕುಶಾಲನಗರ -ಕೊಪ್ಪ ಹಳೆಯ ಸೇತುವೆ ಹಾಗೂ ಹೊಸ ಸೇತುವೆ ದುರಸ್ತಿ ಪಡಿಸುವಂತೆ ಸದಸ್ಯರು ಶಾಸಕರಿಗೆ ಮನವಿ ಮಾಡಿದರು.ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, ಸೇತುವೆ ದುರಸ್ತಿ ಕ್ರಮ ಕೈಗೊಳ್ಳಬೇಕು. ಶಾಸಕರ 5 ಲಕ್ಷ ರು. ಅನುದಾನದಲ್ಲಿ ಹಳೆಯ ಸೇತುವೆಯ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ತಿಳಿಸಿದರು. ಕೊಪ್ಪ ಗೇಟ್‌ನಿಂದ ತಾವರೆಕೆರೆ ವರೆಗೆ ಪಾದಚಾರಿ ಮಾರ್ಗ ಸ್ಥಾಪನೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕರು ಸಭೆಗೆ ಮಾಹಿತಿ ನೀಡಿದರು.ಪೌರಕಾರ್ಮಿಕರಿಗೆ ನಿವೇಶನಕ್ಕೆ ಮನವಿ:
ಮೈಸೂರು ಕೊಡಗು ಗಡಿಭಾಗದ ಪ್ರವೇಶದ್ವಾರ ಬಳಿ ಡಿಜಿಟಲ್ ಶೈನ್ ಬೋರ್ಡ್ ಅಳವಡಿಕೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಒಂದು ಲೀಟರ್ ಬಾಟಲ್‌ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಬಾಟಲ್ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಂತರ್ ಗೌಡ ಸಲಹೆ ನೀಡಿದರು.