ಶಿರಹಟ್ಟಿ: ಶಾಲಾ ವಾಹನಗಳಲ್ಲಿ ಸುರಕ್ಷತೆ ಹಾಗೂ ಕಟ್ಟುನಿಟ್ಟು ನಿಯಮ ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಹಾಗೂ ಶಿರಹಟ್ಟಿ ನಗರ ಘಟಕದ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಅನುದಾನಿತ ಮತ್ತು ಅನುದಾನ ರಹಿತಿ ಶಾಲೆಗಳ ಆಡಳಿತ ಮಂಡಳಿಯವರೊಂದಿಗೆ ಸರ್ಕಾರದ ನಿಯಮ ಪಾಲನೆ ಮಾಡುವ ಕುರಿತಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಒಮ್ಮೆಯೂ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತಿಲ್ಲ. ಖಾಸಗಿ ಶಾಲೆಯವರು ನಿಯಮ ಮೀರಿ ಬೇಕಾಬಿಟ್ಟಿ ಹಣ ಸುಲಿಗೆ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಇದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪ ಮಾಡಿದರು.
ಕೆಲವು ಶಾಲಾ ವಾಹನಗಳಿಗೆ ವಿಮೆ ಕೂಡ ಮಾಡಿಸಿರುವುದಿಲ್ಲ. ಕೆಲವೊಮ್ಮೆ ಚಾಲಕರು ಮದ್ಯಪಾನ ಮಾಡಿದ್ದರೂ ಗಮನಿಸುವುದಿಲ್ಲ. ಮಕ್ಕಳ ಜೀವದ ಜತೆ ಚೆಲ್ಲಾಟ ಸರಿಯಲ್ಲ. ಅವಘಡಗಳು ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಶಾಲಾ ವಾಹನಗಳ ಪರಿಶೀಲನೆ ಹಾಗೂ ಚಾಲಕರ ದಾಖಲಾತಿಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.ತಹಸೀಲ್ದಾರ ಕೆ. ರಾಘವೇಂದ್ರ ರಾವು ಅವರಿಗೆ ಮನವಿ ಸಲ್ಲಿಸಲಾಯಿತು. ಶಿರಹಟ್ಟಿ ತಾಲೂಕು ಘಟಕದ ಗೌರವ ಅಧ್ಯಕ್ಷ ಅಶೋಕ್ ಹುಬ್ಬಳ್ಳಿ, ಪದಾಧಿಕಾರಿಗಳಾದ ಮಹಮ್ಮದ ಶಫಿ ಹೆಸರೂರ್, ಮಂಜುನಾಥ ಹುಬ್ಬಳ್ಳಿ, ಪ್ರಶಾಂತ ಹುಬ್ಬಳ್ಳಿ, ಎಚ್.ಡಿ. ಶಿರಹಟ್ಟಿ, ಐ.ಸಿ. ಕೋಟಿ, ಸಿ.ಪಿ. ಪೂಜಾರ, ಪವನ ಕುರಿ ಉಪಸ್ಥಿತರಿದ್ದರು.