ಮೇವಿನ ಕೊರತೆ ನೀಗಿಸಲು ಕ್ರಮ ವಹಿಸಿ: ಸಚಿವ ರಾಮಲಿಂಗಾರೆಡ್ಡಿ

KannadaprabhaNewsNetwork | Updated : Nov 09 2023, 01:01 AM IST

ಸಾರಾಂಶ

ಮಳೆ ಕೊರತೆಯಿಂದಾಗಿ ಸಾಕಷ್ಟು ಬೆಳೆಗಳು ಹಾನಿಯಾಗಿದ್ದು, ಈಗ ಸುರಿದ ಮಳೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಮೇವಿನ ಕೊರತೆ ನೀಗಿಸಲು ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದರು.

ರಾಮನಗರ: ಮಳೆ ಕೊರತೆಯಿಂದಾಗಿ ಸಾಕಷ್ಟು ಬೆಳೆಗಳು ಹಾನಿಯಾಗಿದ್ದು, ಈಗ ಸುರಿದ ಮಳೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಮೇವಿನ ಕೊರತೆ ನೀಗಿಸಲು ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದರು.

ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರದಿಂದ ಈ ಬಾರಿ ಮೇವು ಬೆಳೆ ಆಗಿಲ್ಲ. ರಾಜ್ಯದ 221 ತಾಲೂಕುಗಳಲ್ಲಿ ಬರ ಇರುವುದರಿಂದ ಮೇವು ಬೆಳೆ ಆಗಿರುವುದಿಲ್ಲ. ಆದುದರಿಂದ ಸುತ್ತಮುತ್ತಲ ರಾಜ್ಯದಿಂದ ಮೇವು ಬೆಳೆ ಖರೀದಿಸಲು ಜಿಲ್ಲಾಡಳಿತ ಕ್ರಮವಹಿಸುವಂತೆ ತಿಳಿಸಿದರು.

ಈಗ ಸುರಿದ ಮಳೆಯಿಂದ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಬೇಕು. ಈಗಾಗಲೇ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲೆಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಕಪ್ಪು ತಲೆಯ ಹುಳು ರೋಗದಿಂದ ತೆಂಗು ಬೆಳೆ ಜಿಲ್ಲೆಯಲ್ಲಿ ಅಂದಾಜು 1000 ಎಕರೆಯಷ್ಟು ನಾಶವಾಗಿದೆ. ಇದಕ್ಕೆ ಅಗತ್ಯವಿರುವ ಔಷದಿ ಸಿಂಪಡಿಸುವುದು ಹಾಗೂ ಕಾಲಕ್ರಮೇಣ ಹುಳುಗಳನ್ನು ನಾಶ ಮಾಡುವ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೆಚ್ಚು ಶ್ರಮವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ಜಿಲ್ಲೆಯಲ್ಲಿನ ಬರ ಪೀಡಿತ ಪ್ರದೇಶಗಳ ಮಾಹಿತಿಯನ್ನು ನೀಡಿದರು.

ಹಾರೋಹಳ್ಳಿ ಹೊಸ ತಾಲೂಕಿಗೆ ಬೇಕಾಗಿರುವ ಮೂಲಭೂತ ಸೌಕರ್ಯದ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾರೋಹಳ್ಳಿ ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಚರಂಡಿ ನೀರು ಕೆರೆಗಳಿಗೆ ಸೇರುತ್ತಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸಚಿವರು ತಿಳಿಸಿದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಹಾರೋಹಳ್ಳಿ ತಾಲೂಕಿಗೆ ಹೆಚ್ಚು ಮೂಲಭೂತ ಸೌಕರ್ಯದ ಅಗತ್ಯವಿದೆ. ಹಾರೋಹಳ್ಳಿಯಲ್ಲಿ ತಾಲೂಕು ಕಚೇರಿ, ನೋಂದಣಾಧಿಕಾರಿಗಳ ಕಚೇರಿ, ಆಸ್ಪತ್ರೆ, ಶಾಲಾ ಕಾಲೇಜುಗಳ ನಿರ್ಮಾಣ ಮಾಡಬೇಕಾಗಿದೆ ಹಾಗೂ ರಸ್ತೆಗಳ ಅಗಲೀಕರಣ, ಕಾಂಕ್ರೀಟ್ ರಸ್ತೆಗಳು ಸೇರಿದಂತೆ ಹೆಚ್ಚು ಮೂಲಭೂತ ಸೌಕರ್ಯಗಳಿಂದ ಹಾರೋಹಳ್ಳಿ ತಾಲೂಕು ಹಿಂದುಳಿದಿದೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಈ ಸಮಸ್ಯೆಗಳಿಗೆ ಹಂತ ಹಂತವಾಗಿ ಕ್ರಮಕೈಗೊಳ್ಳಲಾಗುವುದು ಎಂದರು.

ಹಾರೋಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶಗಳಿದ್ದರು ಸಹ ನಿರುದ್ಯೋಗ ಸಮಸ್ಯೆಗಳು ಈ ಭಾಗದಲ್ಲಿ ಹೆಚ್ಚಾಗಿರುತ್ತದೆ. ಈ ಕುರಿತು ಅಧಿಕಾರಿಗಳು ಗಮನ ಹರಿಸುವಂತೆ ರಾಮಲಿಂಗಾರೆಡ್ಡಿ ತಿಳಿಸಿದರು.

ರೇಷ್ಮೆ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ರೈತರು ಹೆಚ್ಚು ಅಹವಾಲುಗಳನ್ನು ಸಲ್ಲಿಸಿದ್ದಾರೆ ಈ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರವಿ, ರಾಮನಗರ ನಗರಸಭೆ ಅಧ್ಯಕ್ಷ ವಿಜಯಕುಮಾರಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಉಪವಿಭಾಗಾಧಿಕಾರಿ ಬಿನೋಯ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Share this article