ಹಾವೇರಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚು ಕಂಡುಬರುವ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಜಿಲ್ಲೆಯಲ್ಲಿ ದೌರ್ಜನ್ಯ ತಡೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಇರುವ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.ಅಂದಲಗಿ ಗ್ರಾಮ ಪಂಚಾಯಿತಿಯ ಗಾಂವಠಾಣ ವ್ಯಾಪ್ತಿಯಲ್ಲಿ ಲಭ್ಯವಿರುವ 19 ಎಕರೆ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ನಿವೇಶನ ರಹಿತರಿಗೆ ಕಾನೂನಾತ್ಮಕವಾಗಿ ಹಂಚಿಕೆಗೆ ಕ್ರಮ ವಹಿಸಬೇಕು. ಕೂಡಲೇ ಕ್ರಿಯಾಯೋಜನೆ ಯೋಜನೆ ತಯಾರಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಾಲ್ಕು ಜನರಿಗೆ ನೌಕರಿ: ದೌರ್ಜನ್ಯ ಪ್ರಕರಣಗಳಲ್ಲಿ ಮೃತಪಟ್ಟ 7 ಜನರ ಅವಲಂಬಿತರ ಪೈಕಿ ಈಗಾಗಲೇ ನಾಲ್ಕು ಜನರಿಗೆ ಸರ್ಕಾರಿ ಕೆಲಸ ನೀಡಲಾಗಿದೆ. ಒಂದು ಪ್ರಕರಣ ಬೇರೆ ಜಿಲ್ಲೆಗೆ ವರ್ಗಾವಣೆಯಾಗಿದೆ. ಉಳಿದ ಎರಡು ಪ್ರಕರಣದಲ್ಲಿ ಪತ್ನಿಯರು ಅಪರಾಧಿಗಳಾಗಿದ್ದಾರೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳು ಶೂನ್ಯವಾಗಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ಠಾಣೆಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು, ಪ್ರಕರಣದ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು. ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆ ಮೀಸಲಾದ ಅನುದಾನ ಆಯಾ ಸಾಲಿನಲ್ಲೇ ವೆಚ್ಚವಾಗಬೇಕು ಹಾಗೂ ಅರ್ಹ ಫಲಾನುಭವಿಗಳಿಗೆ ತಲುಬೇಕು. ದೇವಗಿರಿ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಾಲನಿಯ ಮನೆಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ದೇವಗಿರಿ ಗ್ರಾಮದ ವಾಲ್ಮೀಕಿ ಸಮುದಾಯದ ಸ್ಮಶಾನಕ್ಕೆ ತಡೆಗೋಡೆ ನಿರ್ಮಾಣ ಮಾಡಬೇಕು. ಬಾಳಂಬೀಡ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ 14- 15ನೇ ಹಣಕಾಸು ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಾಲನಿಯಲ್ಲಿ ಯಾವುದೇ ಕೆಲಸ ಮಾಡುತ್ತಿಲ್ಲ, ಅಲ್ಲಿ ಪಕ್ಕಾ ಗಟಾರ್, ಹೈಮಾಸ್ಟ್ ದ್ವೀಪ ಅಳವಡಿಕೆಯಾಗಬೇಕು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ, ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ಅಜ್ಜಪ್ಪ ಗೋಣೆಮ್ಮನವರ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಇತರರು ಇದ್ದರು.