ಹಾವೇರಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ, ಶಿಕ್ಷೆ ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲ ಸಮುದಾಯಗಳ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಜಿಲ್ಲೆಯಲ್ಲಿ ದೌರ್ಜನ್ಯ ತಡೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಗೆ ಮೀಸಲಾದ ಅನುದಾನ ಆಯಾ ಸಾಲಿನಲ್ಲೇ ವೆಚ್ಚವಾಗಬೇಕು ಹಾಗೂ ಅರ್ಹ ಫಲಾನುಭವಿಗಳಿಗೆ ಯೋಜನೆ ಸೌಲಭ್ಯ ತಲುಪಬೇಕು. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ಕಾಲಕಾಲಕ್ಕೆ ವೇತನ ಪಾವತಿಯಾಗಬೇಕು. ತಾಂಡಾಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರ ಬಗ್ಗೆ ಅರಿವು ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಭರಡಿ ಗ್ರಾಮದಲ್ಲಿ ಸ್ಮಶಾನದ ಜಾಗದ ಸಮಸ್ಯೆ, ಮರಡೂರ ಗ್ರಾಮದಲ್ಲಿ ಸ್ಮಶಾನಕ್ಕೆ ದಾರಿ ಇಲ್ಲ. ಸವಣೂರಿನಲ್ಲಿ 2014ರಲ್ಲಿ 20 ಎಸ್ಸಿ ಕುಟುಂಬಗಳಿಗೆ ಪಟ್ಟಾ ನೀಡಲಾಗಿದೆ. ಆದರೆ ಆರ್‌ಟಿಸಿ ಇಂಡೀಕರಣ ಮಾಡಿಲ್ಲ. ಹರವಿ ಗ್ರಾಮದಲ್ಲಿ ನೀರು ಸಂಗ್ರಹ ಟ್ಯಾಂಕ್ ಶಿಥಿಲಗೊಂಡಿದ್ದು, ಆ ಟ್ಯಾಂಕ್ ನೀರು ಸೋರಿಕೆಯಾಗಿ ನಾಲ್ಕು ಮನೆಗಳಿಗೆ ಜೌಗು ಹಿಡಿದಿದೆ. ಹಿರೇಮಳ್ಳಿಹಳ್ಳಿ ಎಸ್‌ಸಿ ಕಾಲನಿಗೆ ಹೊಸ ಅಂಗನವಾಡಿ ಮಂಜೂರು ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ಶಿವರಾಜ ಹರಿಜನ, ಸಂಜಯಗಾಂಧಿ, ಬಸವರಾಜ ಹೆಡಿಗ್ಗೊಂಡ, ಎನ್.ಎಂ. ಗಾಳೆಮ್ಮನವರ, ಜಗದೀಶ ಹರಿಜನ, ರಮೇಶ ಕೊರವರ, ಅಜ್ಜಪ್ಪ ಗೋಣೆಮ್ಮನವರ, ಮಲ್ಲೇಶ ದೇವಗಿರಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ, ಕಳೆದ ಜನವರಿಯಿಂದ ಈವರೆಗೆ 55 ಪ್ರಕರಣಗಳು ದಾಖಲಾಗಿದ್ದು, 53 ಪ್ರಕರಣಗಳಲ್ಲಿ ಪರಿಹಾರ ಮಂಜೂರು ಮಾಡಲಾಗಿದೆ ಎಂದರು.ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುನೀತ್, ಉಪವಿಭಾಗಾಧಿಕಾರಿ ಶುಭಂ ಶುಕ್ಲಾ, ಜಿಲ್ಲಾ ಸರ್ಕಾರಿ ಅಭಿಯೋಜಕರಾದ ಸರೋಜಾ ಕೂಡಲಮಠ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಇತರರು ಇದ್ದರು.