ಕಾರವಾರ: ಮಳೆಗಾಲದ ಸಂದರ್ಭದಲ್ಲಿ ತಾಲೂಕಿನ ಅರಗಾ ನೌಕಾನೆಲೆ ಪ್ರದೇಶದಿಂದ ಚಂಡಿಯಾ, ಅರಗಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನೌಕಾನೆಲೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿವರ್ಷ ಮಳೆಗಾಲದಲ್ಲಿ ನೌಕಾನೆಲೆ ಪ್ರದೇಶದಲ್ಲಿ ನೆರೆ ಪರಿಸ್ಥಿತಿ ಉಂಟಾಗುತ್ತಿದ್ದು, ಈ ಸಮಸ್ಯೆಗೆ ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೂಳೆತ್ತುವುದು, ಪೈಪ್ ಅಳವಡಿಕೆ ಸೇರಿದಂತೆ ಅತ್ಯಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ, ಸಣ್ಣ ನೀರಾವರಿ ಇಲಾಖೆಯ, ತಾಪಂ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ಮುಂದಿನ ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡುಬರದಂತೆ ನೋಡಿಕೊಳ್ಳಿ ಎಂದು ಡಿಸಿ ಸೂಚಿಸಿದರು.ಹಳೆಯ ಕಾಳಿ ಸೇತುವೆಯ ಅವಶೇಷಗಳ ತೆರವು ಕಾರ್ಯವನ್ನು ಮಾ. 15ರೊಳಗೆ ಸಂಪೂರ್ಣವಾಗಿ ಮುಕ್ತಾಯಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿ, ಹೆದ್ದಾರಿ ಬದಿ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಅತಿಕ್ರಮಣ ಕಟ್ಟಡಗಳನ್ನು ಕಾಲಮಿತಿಯಲ್ಲಿ ತೆರವುಗೊಳಿಸುವಂತೆ ಕುಮಟಾ ಉಪವಿಭಾಗಾಧಿಕಾರಿ ಮತ್ತು ಅಂಕೋಲಾ ತಹಸೀಲ್ದಾರ್ ಸೂಚಿಸಿದರು.
ಹೆದ್ದಾರಿ ವ್ಯಾಪ್ತಿಯಲ್ಲಿ ಜಿಎಸ್ಐ ವತಿಯಿಂದ ಗುರುತಿಸಲಾಗಿರುವ ಗುಡ್ಡ ಕುಸಿತ ಪ್ರದೇಶಗಳಲ್ಲಿ ಮಳೆಗಾಲಕ್ಕೂ ಮುನ್ನ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಆ ಪ್ರದೇಶದಲ್ಲಿ ಗುಡ್ಡ ಕುಸಿತವಾಗುವುದನ್ನು ತಡೆಯುವಂತೆ ಪ್ರಾಧಿಕಾರದ ಆಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಕದ್ರಾ ಮತ್ತು ಗೇರಸೊಪ್ಪ ಜಲಾಶಯಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಂತೆ ಎಸ್‌ಒಪಿ ರಚಿಸಿ ಅದರಂತೆ ಕಾರ್ಯನಿರ್ವಹಿಸುವಂತೆ ತಿಳಿಸಿದರು.