ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಒಂದು ವಾರದೊಳಗೆ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದರು.ವಿಧಾನಸೌಧದ 3ನೇ ಮಹಡಿಯಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹಾಗೂ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಮಾಹಿತಿ ನೀಡಿದರು.
ನಾನು ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡುತ್ತೇನೆ. ಅಧಿಕಾರಿಗಳು ಇನ್ನೊಂದು ವಾರದಲ್ಲಿ ಆ ಹೋಬಳಿ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸೂಚಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ವಾಸ್ತವ ವಿವರಿಸಿ ಮಾತನಾಡಿ, ಜವನಗೊಂಡನಹಳ್ಳಿ ಹೋಬಳಿಯಲ್ಲಿ ಕುಡಿಯುವ ನೀರಿನ ಅಭಾವ ಮೊದಲಿನಿಂದಲೂ ಇದೆ. ಈಗಾಗಲೇ ಕುಡಿಯುವ ನೀರನ್ನು ಟ್ಯಾoಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಆ ಭಾಗದ ಬೋರ್‌ವೆಲ್‌ಗಳಲ್ಲಿ ನೀರೇ ಬರದಂತಾಗಿದೆ. ಹಳ್ಳಿಯ ಜನರು ಜಮೀನುಗಳಿಗೆ ಬೋರ್‌ಗಳನ್ನೇ ಅವಲಂಬಿಸಿದ್ದಾರೆ ಎಂದು ಫೋಟೋ, ವಿಡಿಯೋಗಳನ್ನು ಉಪಮುಖ್ಯಮಂತ್ರಿಗಳಿಗೆ ತೋರಿಸಿ ಕುಡಿಯುವ ನೀರಿನ ಸಂಕಷ್ಟದ ಬಗ್ಗೆ ವಿವರಿಸಿ ತಾಲೂಕಿನ ವಾಣಿವಿಲಾಸ ಜಲಾಶಯದಿಂದ ಜವನಗೊಂಡನಹಳ್ಳಿ ಹೋಬಳಿಯ ಗ್ರಾಮಗಳಿಗೆ 0.50 ಟಿಎಂಸಿ ನೀರು ಹಂಚಿಕೆ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಉಪ ಮುಖ್ಯಮಂತ್ರಿಗಳು ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ವಾಣಿವಿಲಾಸ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಪ್ರದೇಶಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಯಿತು. ಮುಳುಗಡೆಯಾಗಿ ತೊಂದರೆಯಾಗುತ್ತಿರುವ ಮನೆಗಳು, ಜಮೀನು, ಬೆಳೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಲಾಯಿತು. ಮುಳುಗಡೆ ತಡೆಗಟ್ಟುವ ಸಂಬಂಧದ ಪ್ರಾಜೆಕ್ಟ್ ಅನ್ನು ದೆಹಲಿಗೆ ಅಪ್ರೂವಲ್ ಗೆ ಕಳಿಸಿದ್ದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಮಕುಮಾರ್ ಭರವಸೆ ನೀಡಿದ್ದಾರೆ. ಸಭೆಯಲ್ಲಿ ಸಚಿವ ಎಚ್.ಕೆ.ಪಾಟೀಲ್, ಶಿವರಾಜ್ ತಂಗಡಗಿ, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಚಳ್ಳಕೆರೆ ಟಿ.ರಘುಮೂರ್ತಿ ಹಾಗೂ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹಾಜರಿದ್ದರು.