ಕುಂದುಕೊರತೆ ಆಲಿಕೆ । ಅಧಿಕಾರಿಗಳಿಗೆ ಸೂಚನೆ । ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ । ಪರಿಹಾರಕ್ಕೆ ಸೂಚನೆ
ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪುಕಾಂಪಟ್ಟಿ, ಆತೂರು, ಪುದುಕಾಡು ಗ್ರಾಮಗಳಿಗೆ ಶೀಘ್ರವೇ ಕೊಳವೆಬಾವಿ ಕೊರೆಸಿ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಿ ನೀರಿನ ಸಮಸ್ಯೆ ಬಗೆಹರಿಸುವಂತೆ ಸಂಸದ ಸುನಿಲ್ ಬೋಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹನೂರು ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಕುಂದುಕೊರತೆ ಆಲಿಸಿ ನಂತರ ಮಾತನಾಡಿದರು.ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮೀಪದಲ್ಲಿಯೇ ಕಾವೇರಿ ನದಿ ಹರಿಯುತ್ತಿದ್ದರೂ ಕೆಲವು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದು ವಿಪರ್ಯಾಸ, ಈ ಕೂಡಲೇ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸೂಕ್ತ ಕ್ರಮ ವಹಿಸಬೇಕು, ಆಲಂಬಾಡಿ ಗ್ರಾಮದ ಗಿರಿಜನರಿಗೆ ಈಗಾಗಲೇ ಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಕೆಲವು ಮನೆಗಳಿಗೆ ನೀರು ತಲುಪದೇ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಜಲಜೀವ ಮಿಷನ್ ಕಾಮಗಾರಿ ಮುಗಿಯುವವರೆಗೆ ಹೆಚ್ಚುವರಿ ಪೈಪ್ ಅಳವಡಿಸಿ ಪ್ರತಿಯೊಂದು ಕುಟುಂಬಕ್ಕೂ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದರು.
ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳಾದ ಮಾರಿಕೋಟೆ ಆಲಂಬಾಡಿ ಪೂಜಾ ಕಾಡು ಜಂಬುಟಾಪಟ್ಟಿ, ಅಪ್ಪು ಕಾಮ ಪಟ್ಟಿ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಇರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅತಿ ಶೀಘ್ರದಲ್ಲಿ ವಿದ್ಯುತ್ ಕಲ್ಪಿಸಿಕೊಡಲು ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.