ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಿ

KannadaprabhaNewsNetwork |  
Published : Oct 10, 2025, 01:00 AM IST
10ಸಿಎಚ್‌ಎನ್‌53ಚಾಮರಾಜನಗರದ ಜಿಲ್ಲಾ ಪಂಚಾಯತ್‌ನ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿ ಬುಧವಾರ  ಕುಡಿಯುವ ನೀರಿನ ಸಂಬಂಧ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಸಭೆ ನಡೆಸಿದರು. | Kannada Prabha

ಸಾರಾಂಶ

ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಜನವಸತಿ ಪ್ರದೇಶಗಳ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಗುರುತಿಸಿ, ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಜನವಸತಿ ಪ್ರದೇಶಗಳ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಗುರುತಿಸಿ, ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿ ಬುಧವಾರ ಕುಡಿಯುವ ನೀರಿನ ಸಂಬಂಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿದರು.

ಕುಡಿಯುವ ನೀರಿನ ಅಭಾವ ಇರುವ ಗ್ರಾಮಗಳ ಪಟ್ಟಿಯನ್ನು ಮುಂಚಿತವಾಗಿಯೇ ಸಲ್ಲಿಸಬೇಕು. ಸಮಸ್ಯಾತ್ಮಕ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಟಾಸ್ಕ್ ಪೋರ್ಸ್ ಸಭೆಗಳು ಸಕಾಲಕ್ಕೆ ನಡೆಸಬೇಕು. ಕುಡಿಯುವ ನೀರಿನ ಸ್ಥಾವರಗಳಾದ ಓವರ್ ಹೆಡ್ ಟ್ಯಾಂಕ್, ತೊಂಬೆಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಶುದ್ದ ಕುಡಿಯುವ ನೀರಿನ ಘಟಕಗಳು ನಿರ್ವಹಣೆಯಾಗಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯನ್ನು ನಡೆಸಬೇಕು ಎಂದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹ ಕುಡಿಯುವ ನೀರಿಗೆ ತೊಂದರೆಯಾದ ಪಕ್ಷದಲ್ಲಿ ತಕ್ಷಣ ಸಂಬಂಧಿಸಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರವೇ ಪರಿಹಾರ ಕ್ರಮಗಳಿಗೆ ಮುಂದಾಗಬೇಕು. ವಿಶೇಷವಾಗಿ ಹನೂರು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್ ಹಾಗೂ ಖಾಸಗಿ ಬೋರ್‌ವೆಲ್ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಬೇಕು. ಅರಣ್ಯ ಇಲಾಖೆಯಲ್ಲಿ ಬಾಕಿ ಇರುವ ಕುಡಿಯುವ ನೀರಿನ ಸಂಬಂಧ ಪ್ರಸ್ತಾವನೆಗಳಿಗೆ ಕಾಲಕಾಲಕ್ಕೆ ಪರಿವೇಶ್ ಪೋರ್ಟಲ್‌ನಲ್ಲಿ ಉತ್ತರಿಸಬೇಕು. ಕೊಳ್ಳೇಗಾಲ ತಾಲ್ಲೋಕಿನ ಜಾಗೇರಿ ಮತ್ತು ಸತ್ತೇಗಾಲ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತಕ್ಷಣ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲಾ 130 ಗ್ರಾಮ ಪಂಚಾಯಿತಿಗಳಿಗೂ ಈಗಾಗಲೇ ಎಫ್‌ಐಕೆ ಕಿಟ್‌ಗಳನ್ನು ವಿತರಿಸಿದ್ದು, ನೀರಿನ ಮಾದರಿಗಳನ್ನು ಪರೀಕ್ಷಿಸಲು ತರಭೇತಿ ನೀಡಲಾಗಿದೆ. ಪಿಡಿಒಗಳು ಕಿಟ್ ಮೂಲಕ ಆಯಾ ವ್ಯಾಪ್ತಿಯ ಜಲ ಮೂಲಗಳನ್ನು ಪರೀಕ್ಷಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಯೋಗಾಲಯಗಳಲ್ಲಿಯೂ ಸಹ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿ ಶುದ್ದ ಕುಡಿಯುವ ನೀರನ್ನು ಸಾರ್ವಜನಿಕರಿಗೆ ಪೂರೈಸುವಂತೆ ತಿಳಿಸಿದರು.

ಉಪ ಕಾರ್ಯದರ್ಶಿ ಡಿ.ಸಿ. ಶೃತಿ, ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಜಗದೀಶ್.ಎಸ್, ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಾದ ಉಮೇಶ್, ಗುರುಶಾಂತಪ್ಪ ಬೆಳ್ಳುಂಡಗಿ, ಗಿರಿಧರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಸುಧನ್ವನಾಗ್, ಚಂದ್ರಶೇಖರ್.ಎಂ, ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ