ಕನ್ನಡಪ್ರಭ ವಾರ್ತೆ ಮಡಿಕೇರಿ
ಮಾದಾಪುರ ಬಳಿಯ ಗರಗಂದೂರಿನ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಷನ್ ಸೊಸೈಟಿಯ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ತೀತೀರ ರೋಷನ್ ಅಪ್ಪಚ್ಚು ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿಯೂ ದುಶ್ಚಟಗಳಿಗೆ ಬಲಿಯಾಗಬೇಡಿ, ಒಮ್ಮೆ ದುಶ್ಚಟಕ್ಕೆ ಈಡಾದರೆ ಮತ್ತೆ ಅದರಿಂದ ಹೊರಬರಲಾಗದೇ ಜೀವನದಲ್ಲಿ ಉದ್ದೇಶಿತ ಸಾಧನೆಯ ಗುರಿಯತ್ತ ಸಾಗುವುದು ಕಷ್ಟಸಾಧ್ಯವಾಗಲಿದೆ ಎಂದರು.ರೋಟರಿ ಜಿಲ್ಲೆ 3181 ನ ಮಾಜಿ ಗವರ್ನರ್ ಎಚ್.ಆರ್. ಕೇಶವ್ ಮಾತನಾಡಿ, ಮಕ್ಕಳಿಗೆ ಕಷ್ಟಗಳ ಅನುಭವ ಆಗದೇ ಹೋದರೆ, ಅವರಲ್ಲಿನ ಸುಪ್ತ ಪ್ರತಿಭೆ ಹೊರಹೊಮ್ಮುವುದಿಲ್ಲ ಎಂದರು.
ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿ ಅಧ್ಯಕ್ಷ ಕರ್ನಲ್ ಬಿ.ಜಿ.ವಿ. ಕುಮಾರ್ ಮಾತನಾಡಿ, 60 ವರ್ಷಗಳ ಹಿಂದೆ ಮಾದಾಪುರದ ಪುಟ್ಟ ಕಟ್ಟಡದಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಹತ್ತಾರು ಗ್ರಾಮಗಳ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವ ಮೂಲಕ ಸುಶಿಕ್ಷಿತ ಸಮಾಜದ ನಿರ್ಮಾಣಕ್ಕೆ ಕಾರಣವಾಗಿದೆ. ಹಿಂದಿನ ಆಡಳಿತ ಮಂಡಳಿಯ ದೂರದೃಷ್ಟಿಯ ತೀರ್ಮಾನಗಳೂ ಈ ಸಂಸ್ಥೆಯನ್ನು ಪ್ರಬಲವಾಗಿ ಬೆಳೆಸಿದೆ ಎಂದರಲ್ಲದೇ, ಇದೇ ಶೈಕ್ಷಣಿಕ ಸಾಲಿನಿಂದ ಸಂಸ್ಥೆಯಲ್ಲಿ ಆಂಗ್ಲಮಾಧ್ಯಮ ಶಾಲೆಯನ್ನು ಪ್ರಾರಂಭಿಸುತ್ತಿರುವುದಾಗಿ ಘೋಷಿಸಿದರು.
ವಿದ್ಯಾರ್ಥಿಗಳಿಂದ ಪಥಸಂಚಲನ, ಸಾಮೂಹಿಕ ಅಂಗಸಾಧನೆ ಗಮನ ಸೆಳೆದವು.
ಸ್ನೇಹಸಮ್ಮಿಲನ:
ಕಾಫಿ ಬೆಳೆಗಾರ ಸಿ.ಪಿ. ಮುದ್ದಪ್ಪ, ಅರಣ್ಯ ಇಲಾಖೆಯ ಹಿರಿಯ ಸಹಾಯಕಿ ವಿಜಯಲಕ್ಷ್ಮೀ, ಕಾಫಿ ಬೆಳೆಗಾರ ಎಚ್.ಎಸ್. ಉತ್ತಯ್ಯ, ಉದ್ಯಮಿ ಬಿ.ವಿ. ವೆಂಕಪ್ಪ, ಸಂಸ್ಥೆಯಲ್ಲಿ ಕಳೆದ ದಿನಗಳನ್ನು ಅವಲೋಕಿಸಿದರು. ಸಂಸ್ಥೆಯ ಅಧ್ಯಕ್ಷ ಕರ್ನಲ್ ಬಿ.ಜಿ.ವಿ. ಕುಮಾರ್, ಎಸ್.ಸಿ.ಮಾಲತಿ, ಗಣೇಶ್ ಎಚ್.ಎಸ್., ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಪ್ರೌಡಶಾಲಾ ಮುಖ್ಯಶಿಕ್ಷಕಿ ಕೆ.ಯು. ರೀಟಾ ವೇದಿಕೆಯಲ್ಲಿದ್ದರು.
ಭೋಜನ ಶಾಲೆ ಉದ್ಘಾಟನೆ: ವಜ್ರಮಹೋತ್ಸವ ಸಂದರ್ಭ 25 ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾದ ಭೋಜನ ಶಾಲೆಯನ್ನು ಗಣ್ಯರು ಉದ್ಘಾಟಿಸಿದರು.
ವಿದ್ಯಾರ್ಥಿ ಜೀವನದಲ್ಲಿ ದಾರಿತಪ್ಪಲು ಸಾಕಷ್ಟು ಅವಕಾಶಗಳು ಇರುತ್ತದೆ. ಆದರೆ ಇಂಥ ಅವಕಾಶಗಳು ಎದುರಾದಾಗ ಅವುಗಳನ್ನು ತಿರಸ್ಕರಿಸಿ, ಜೀವನಕ್ಕೆ ಪ್ರಯೋಜನವಾಗುವಂಥ ಆದರ್ಶದ ಹಾದಿಯಲ್ಲಿ ಸಾಗಬೇಕೆಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕಿವಿಮಾತು ಹೇಳಿದರು. ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿಯ ವಜ್ರಮಹೋತ್ಸವ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.