ಭಟ್ಕಳ: ರಾಜ್ಯಾದ್ಯಂತ ಮಾ.೮ರಂದು ನಡೆಯಲಿರುವ ಲೋಕ್ ಅದಾಲತ್ ಕಾರ್ಯಕ್ರಮ ಭಟ್ಕಳದ ಹಿರಿಯ ಶ್ರೇಣಿಯ ನ್ಯಾಯಾಲಯ, ಪ್ರಥಮ ದರ್ಜೆ ನ್ಯಾಯಾಲಯ ಹಾಗೂ ಹೆಚ್ಚುವರಿ ನ್ಯಾಯಾಲಗಳಲ್ಲಿಯೂ ನಡೆಯಲಿದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಕಾಂತ ಕುರಣಿ ಹೇಳಿದರು.
ಭಟ್ಕಳದ ಮೂರು ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ ಕಾರ್ಯಕ್ರಮ ನಡೆಯುತ್ತಿದ್ದು, ರಾಜೀಯಾಗತಕ್ಕ ಸುಮಾರು ೧೫೦೦ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಗುರುತಿಸಲಾಗಿದೆ. ಇವುಗಳನ್ನು ಇತ್ಯರ್ಥ ಪಡಿಸುವಲ್ಲಿ ಕ್ರಮ ವಹಿಸಲಾಗಿದೆ. ಈಗಾಗಲೇ ವಕೀಲರು, ಕಕ್ಷಿದಾರರು, ಬ್ಯಾಂಕ್ ವ್ಯವಸ್ಥಾಪಕರು, ಪೊಲೀಸ್ ಇಲಾಖೆ ಇವರನ್ನು ಸೇರಿಸಿ ಅಭಿಪ್ರಾಯ ಸಂಗ್ರಹಿಸಿದ್ದು ಎಲ್ಲರಿಂದಲೂ ಉತ್ತಮ ಸಹಕಾರ ಸಿಕ್ಕಿದೆ ಎಂದರು.
ಕಳೆದ ಲೋಕ ಅದಾಲತ್‌ನಲ್ಲಿ ೧೧೪೬ ಪ್ರಕರಣಗಳನ್ನು ಸಾರ್ವಜನಿಕರು ಹಾಗೂ ವಕೀಲರ ಸಹಕಾರದಿಂದ ಇತ್ಯರ್ಥಪಡಿಸಲಾಗಿತ್ತು. ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಗೊಂಡರೆ ಅದಕ್ಕೆ ಮೇಲ್ಮನವಿ ಇರಲ್ಲ. ಪರಸ್ಪರ ಒಪ್ಪಿ ಇಲ್ಲಿ ರಾಜೀಯಾಗುವುದರಿಂದ ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಿದಂತಾಗುತ್ತದೆ. ಇಲ್ಲಿ ಎರಡೂ ಪಕ್ಷಗಾರರು ಗೆಲುವು ಸಾಧಿಸಿದಂತಾಗುತ್ತದೆ. ಅನೇಕ ಕೌಟುಂಬಿಕ ಪ್ರಕರಣಗಳಲ್ಲಿ ರಾಜೀಯಾದ ನಂತರ ಎಲ್ಲರೂ ಒಂದಾಗಿ ಬಾಳುತ್ತಾರೆ. ಹಿಸ್ಸೆ ಪ್ರಕರಣದಲ್ಲಿಯೂ ಉತ್ತಮ ಬಾಂಧವ್ಯ ವೃದ್ಧಿಯಾಗಿದ್ದು ಇದೆ ಎಂದರು.ಸಾರ್ವಜನಿಕರು ಲೋಕ್ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದರು.