ದುಡಿಯೋಣ ಬಾ ಅಭಿಯಾನಕ್ಕೆ ತಾಪಂ ಇಒ ಚಾಲನೆ
ತಾಲೂಕಿನ ಕತ್ತೆಬೆನ್ನೂರು ಗ್ರಾಪಂ ವ್ಯಾಪ್ತಿಯ ಕತ್ತೆಬೆನ್ನೂರಿನಲ್ಲಿ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ದುಡಿಯೋಣ ಬಾ ಹಾಗೂ ಆರೋಗ್ಯ ತಪಾಸಣಾ ಅಭಿಯಾನಕ್ಕೆ ತಾಪಂ ಇಒ ಎಂ.ಉಮೇಶ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ತಾಲೂಕಿನ 26 ಗ್ರಾಪಂಯಲ್ಲಿ ದುಡಿಯೋಣ ಬಾ ಅಭಿಯಾನ ಆಯೋಜಿಸಲಾಗಿದ್ದು, ಈ ಅಭಿಯಾನದ ಅವಧಿಯಲ್ಲಿ ಗ್ರಾಪಂಯ ಎಲ್ಲಾ ನರೇಗಾ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ರೋಜಗಾರ್ ದಿವಸ್ ಆಚರಣೆ ಮಾಡಿ ಕೂಲಿಕಾರರಿಂದ ಕೆಲಸಕ್ಕೆ ಬೇಡಿಕೆ ಪಡೆದು, ಎನ್‌ಎಂಆರ್ ಪತ್ರ ವಿತರಣೆ ಮಾಡಿ, ನಿರಂತರವಾಗಿ ಕೆಲಸ ಕೊಡಲಾಗುವುದು, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಿರಂತರವಾಗಿ ಒಂದು ಕುಟುಂಬಕ್ಕೆ 100 ದಿನ ಕೆಲಸ ನೀಡಿ, ವಲಸೆ ತಡೆಗಟ್ಟಲಾಗುವುದು, ಕೂಲಿಯಿಂದ ಬಂದ ಹಣವನ್ನು ಕುಟುಂಬದ ನಿರ್ವಹಣೆಗೆ ಬಳಕೆ ಮಾಡಿಕೊಂಡು, ಯೋಜನೆಯ ಲಾಭವನ್ನು ಪಡೆದುಕೊಂಡು ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಕೂಲಿಕಾರರಿಗೆ ತಿಳಿಸಿದರು.ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ನರೇಗಾ ಕೆಲಸಕ್ಕೆ ಬಂದು, ಮಹಿಳೆಯರ ಭಾಗವಹಿಸಿಕೆ ಪ್ರಮಾಣ ತಾಲೂಕಿನಲ್ಲಿ ಶೇ. 60ರಷ್ಟು ಆಗಲಿ, ಪ್ರಸ್ತುತ ಬೇಸಿಗೆ ಕಾಲ ಇರುವುದರಿಂದ ಕೆಲಸದ ಅಳತೆಯ ಪ್ರಮಾಣದಲ್ಲಿ ಶೇ.30ರಷ್ಟು ರಿಯಾಯಿತಿ ನೀಡಲಾಗಿದೆ. ಹಿರಿಯ ನಾಗರಿಕರು ವಿಕಲಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಇದೆ ಎಂದರು.
ಆರೋಗ್ಯದ ಹಿತ ದೃಷ್ಟಿಯಿಂದ ನರೇಗಾ ಕೆಲಸಕ್ಕೆ ಬಂದು, ನಿಗದಿಪಡಿಸಿದ ಅಳತೆಯಂತೆ ಕೆಲಸ ಮಾಡಿ ಪ್ರತಿ ದಿನ ನಿಗದಿಪಡಿಸಿರುವ ₹370 ಕೂಲಿ ಮೊತ್ತವನ್ನುಪೂರ್ಣ ಪ್ರಮಾಣದಲ್ಲಿ ಪಡೆಯಬೇಕೆಂದು ತಿಳಿಸಿದರು.