ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರ ನೀಡುವ ವಿದ್ಯಾರ್ಥಿ ವೇತನವನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಶಾಸಕ ಪಿ. ರವಿಕುಮಾರ್ ಸಲಹೆ ನೀಡಿದರು.ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆಯ ಕಡೆ ವಿದ್ಯಾರ್ಥಿಗಳು ಹೆಚ್ಚು ಗಮನಹರಿಸಬೇಕು. ಶಿಕ್ಷಣದಿಂದ ಭವಿಷ್ಯವನ್ನು ಉಜ್ವಲಗೊಳಿಸಿಕೊಂಡಾಗ ಬದುಕು ಸಾರ್ಥಕತೆ ಪಡೆದುಕೊಳ್ಳುತ್ತದೆ. ವಿದ್ಯಾವಂತರಾಗಿ ಉತ್ತಮ ಹುದ್ದೆಗೇರಿ ನಾಡಿಗೆ ಮತ್ತು ದೇಶಕ್ಕೆ ಕೊಡುಗೆ ನೀಡುವಂತೆ ತಿಳಿಸಿದರು.
ಪರಿಶಿಷ್ಟ ಜಾತಿ, ಪಂಗಡದವರನ್ನೂ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಹಾಗೂ ಶಿಕ್ಷಣ ಅವರಿಗೂ ದೊರಕಬೇಕೆಂಬ ಮಹತ್ವಾಕಾಂಕ್ಷೆಯಿಂದ ಸರ್ಕಾರ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಅವರೂ ಚೆನ್ನಾಗಿ ಓದಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು. ಶಿಕ್ಷಣದಿಂದ ಮಾತ್ರ ನೀವು ಸುಂದರ ಮತ್ತು ಸುಭದ್ರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ನುಡಿದರು.ವಿದ್ಯೆ ಯಾರೊಬ್ಬರೂ ಕದಿಯಲಾಗದ ಆಸ್ತಿ. ಪೋಷಕರು ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ ಶಿಕ್ಷಣವನ್ನು ದೊರಕಿಸಿಕೊಟ್ಟು ಮಕ್ಕಳನ್ನು ಈ ದೇಶದ ಆಸ್ತಿಯನ್ನಾಗಿ ಮಾಡಬೇಕು. ಪ್ರಸ್ತುತ ಯುಗದಲ್ಲಿ ಶಿಕ್ಷಣದಲ್ಲಿ ಅವಕಾಶಗಳ ಬಾಗಿಲು ಮುಕ್ತವಾಗಿ ತೆರೆದುಕೊಂಡಿವೆ. ವಿದ್ಯಾರ್ಥಿಗಳು ಸರಿಯಾದದ್ದನ್ನು ಆಯ್ಕೆ ಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳುವಂತೆ ತಿಳಿಸಿದರು.
ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಶುಲ್ಕ ಪಾವತಿಗೆ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ. ನಾನು ಸದಾ ನಿಮ್ಮ ಜೊತೆಗಿರುತ್ತೇನೆ. ನಿಮ್ಮ ಓದಿಗೆ ನೆರವಾಗಿ ನಿಲ್ಲಲು ನಾನು ಸದಾ ಸಿದ್ಧ ಎಂದು ಭರವಸೆ ನೀಡಿದರು.ನಗರಸಭೆ ಆಯುಕ್ತ ಆರ್. ಮಂಜುನಾಥ್ ಮಾತನಾಡಿ, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಹಾಗೂ ಎಂಎ ಸೇರಿ ೨೦೫ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿಗೆ ಸೇರಿದ ೧೦೩ ವಿದ್ಯಾರ್ಥಿಗಳಿಗೆ ೫,೮೦,೦೦೦ ರು. ಹಾಗೂ ೧೦೨ ಇತರೆ ಕಡು ಬಡ ವಿದ್ಯಾರ್ಥಿಗಳಿಗೆ ೫,೪೦,೦೦೦ ರು. ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ೩ ಸಾವಿರ ರು., ಪಿಯುಸಿ ವಿದ್ಯಾರ್ಥಿಗಳಿಗೆ ೪,೫೦೦ ರು., ಬಿಎ ವಿದ್ಯಾರ್ಥಿಗಳಿಗೆ ೬ ಸಾವಿರ ರು., ಎಂ.ಎ. ವಿದ್ಯಾರ್ಥಿಗಳಿಗೆ ೧೫ ಸಾವಿರ ರು. ನೀಡಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ನಾಗೇಶ್, ಶ್ರೀಧರ್, ಸೌಭಾಗ್ಯ ಸೇರಿ ಇತರರಿದ್ದರು.