ಕನ್ನಡಪ್ರಭ ವಾರ್ತೆ ಭಟ್ಕಳ
ಇಲ್ಲಿನ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಆಡಳಿತಾಧಿಕಾರಿ ಜಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಆರೋಗ್ಯ ಇಲಾಖೆಯ ಪ್ರತಿನಿಧಿ ತಾಲೂಕಿನಲ್ಲಿ 8 ಡೆಂಘೀ ಪ್ರಕರಣಗಳನ್ನು ಗುರುತಿಸಿದ್ದು, ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಗ್ರಾಮೀಣ ಹಾಗೂ ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಬ್ಲಿಚಿಂಗ್ ಪೌಡರ್ ಸಿಂಪರಣೆ ಮಾಡಲಾಗುತ್ತಿದೆ ಎಂದಾಗ ಆಡಳಿತಾಧಿಕಾರಿ ಅವರು ಡೆಂಘೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಡೆಂಘೀ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡು ಈ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು. ಭಟ್ಕಳ ತಾಲೂಕಿಗೆ ಮೌಲನಾ ಆಜಾದ್ ಶಾಲೆ ಮಂಜೂರಾಗಿದ್ದು, ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೆ 2 ಶಾಲೆ ಮಂಜೂರು ಮಾಡುತ್ತಿದ್ದು, ಅದರಲ್ಲಿ ಒಂದು ಭಟ್ಕಳಕ್ಕೆ ಲಭಿಸಿದ್ದು, 2024- 25ರ ಶೈಕ್ಷಣಿಕ ವರ್ಷದಲ್ಲೇ ಆರಂಭಿಸುವುದಾಗಿ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಶಂಶುದ್ಧೀನ್ ಅವರು ಮಾಹಿತಿ ನೀಡಿದರು.
ತಾಲೂಕಿನಲ್ಲಿ ಪ್ರಸ್ತುತ ಒಟ್ಟು 12 ಅಂಗನವಾಡಿ ಕಟ್ಟಡಗಳು ಮಂಜೂರಾಗಿದ್ದು, 4 ಕಟ್ಟಡಗಳ ಕಾವiಗಾರಿ ಪ್ರಗತಿಯಲ್ಲಿದ್ದು, 8 ಕೇಂದ್ರಗಳ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಆರಂಭಿಸುವ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ ಮೊಗೇರ ತಿಳಿಸಿದರು.ಶಿರಾಲಿಯಲ್ಲಿ ಬಸ್ಸು ತಂಗುದಾಣವಿಲ್ಲದೆ ನಿಗದಿತ ಸ್ಥಳದಲ್ಲಿ ಬಸ್ಸು ನಿಲುಗಡೆಗೆ ತೊಂದರೆಯಾಗುತ್ತಿದ್ದು, ಇದರಿಂದ ಭವಿಷ್ಯದಲ್ಲಿ ಭಾರಿ ಅಪಾಯದ ಸಂಭವವಿದೆ. ಶಿರಾಲಿಯಲ್ಲಿ ಬಸ್ಸು ತಂಗುದಾಣ ತೀರಾ ಅಗತ್ಯವಿದ್ದು, ಕೂಡಲೇ ನಿರ್ಮಿಸಿದರರೆ ಅನುಕೂಲವಾಗಲಿದೆ ಎಂದು ಡಿಪೋ ವ್ಯವಸ್ಥಾಪಕರು ಸಭೆಗೆ ತಿಳಿಸಿದರು. ಇದಕ್ಕೆ ಆಡಳಿತಾಧಿಕಾರಿ ಅವರು ಶಿರಾಲಿ ಗ್ರಾಮ ಪಂಚಾಯಿತಿಯೊಂದಿಗೆ ಸಮನ್ವಯ ಸಾಧಿಸಿ ಬಸ್ಸು ತಂಗುದಾಣ ನಿರ್ಮಾಣಕ್ಕೆ ಪ್ರಯತ್ನಿಸುವಂತೆ ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿ.ಡಿ. ಮೊಗೇರ, ವಿವಿಧ ಇಲಾಖೆಯ ಅಧಿಕಾರಿಗಳಿದ್ದರು. ತಾಪಂ ವ್ಯವಸ್ಥಾಪಕಿ ಲತಾ ನಾಯ್ಕ ಸ್ವಾಗತಿಸಿದರು. ಕರಿಯಪ್ಪ ನಾಯ್ಕ ವಂದಿಸಿದರು.ಭಟ್ಕಳ ತಾಪಂನ ₹7825.19 ಲಕ್ಷ ಮುಂಗಡಪತ್ರ ಮಂಡನೆ
ಭಟ್ಕಳ: ತಾಲೂಕು ಪಂಚಾಯಿತಿಯ 2024- 25ನೇ ಸಾಲಿನ ಆಯವ್ಯಯ ಪತ್ರವನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಲಾಯಿತು.
ಈ ಮುಂಗಡ ಪತ್ರವು ಸಾರ್ವಜನಿಕ ಶಿಕ್ಷಣ ಇಲಾಖೆಗೆ ₹6641.40 ಲಕ್ಷ, ವೈದ್ಯಕೀಯ ಹಾಗೂ ಜನಾರೋಗ್ಯ ಇಲಾಖೆಗೆ ₹60.08 ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ₹14.63 ಲಕ್ಷ, ಶಿಶು ಅಭಿವೃದ್ಧಿ ಇಲಾಖೆಗೆ ₹667.07 ಲಕ್ಷ, ಕೃಷಿ ಇಲಾಖೆಗೆ ₹23.16 ಲಕ್ಷ, ಪಶು ಸಂಗೋಪನೆ ಇಲಾಖೆಗೆ ₹60.97 ಲಕ್ಷ ಹಾಗೂ ತಾಲೂಕು ಪಂಚಾಯಿತಿ ಕಾರ್ಯಕ್ರಮಗಳಿಗೆ ₹357.88 ಲಕ್ಷ ನಿಗದಿಪಡಿಸಿ ತಾಲೂಕು ಪಂಚಾಯಿತಿ ನಿಧಿಯ ಎಲ್ಲ ಕಾರ್ಯಕ್ರಮಗಳಿಗೆ ಒಟ್ಟು ₹7825.19 ಲಕ್ಷ ಅನುದಾನದ ವೆಚ್ಚಕ್ಕೆ ಗುರಿ ಹೊಂದಿರುವುದನ್ನು ಸಭೆಯು ತಾಲೂಕು ಪಂಚಾಯಿತಿ ನಿಧಿಯ ಕಾರ್ಯಕ್ರಮ ಪರಿಶೀಲಿಸಿ ಸರ್ವಾನುಮತದಿಂದ 2024- 25ನೇ ಸಾಲಿನ ಆಯವ್ಯಯಕ್ಕೆ ಅನುಮೋದನೆ ನೀಡಿತು.ಆಡಳಿತಾಧಿಕಾರಿ ಸತೀಶ, ಕಾರ್ಯನಿರ್ವಹಣಾಧಿಕಾರಿ ವಿ.ಡಿ. ಮೊಗೇರ ಉಪಸ್ಥಿತರಿದ್ದರು.