ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪಂಚಾಯ್ತಿ ಕೆಸ್ವಾನ್ ಸಭಾಂಗಣದಲ್ಲಿ ನಡೆದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು ೨೮೯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದೆಂಬ ಆತಂಕವಿದೆ. ಈಗಾಗಲೇ ೧೩ ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ಪರ್ಯಾಯವಾಗಿ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದ ಗ್ರಾಮಗಳಲ್ಲಿಯೂ ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಕೊಳವೆಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆಯಾದ ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡಲಾಗಿದೆ. ಅದರಂತೆ ಕೊಳವೆಬಾವಿಗಳನ್ನು ಮರು ಆಳಗೊಳಿಸುವುದು, ಹೆಚ್ಚುವರಿ ಪೈಪ್ ಅಳವಡಿಸುವುದು, ಅಗತ್ಯವಿರುವ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಹಾಗೂ ಪಂಪ್ ಮತ್ತು ಮೋಟಾರ್‌ಗಳು ಕೆಟ್ಟು ಹೋದಲ್ಲಿ ತಕ್ಷಣವೇ ದುರಸ್ತಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಎಲ್ಲಾ ಕುಡಿಯುವ ನೀರಿನ ಮೂಲಗಳು, ಕೊಳವೆಬಾವಿಗಳು, ಪಂಪ್‌ಸೆಟ್‌ಗಳು ಹಾಗೂ ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ, ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮವಹಿಸಲು ತಿಳಿಸಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಸೇರಿದಂತೆ ಪರ್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿ ತೆರೆಯಲಾಗಿದೆ. ಜಿಲ್ಲೆಯ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಜಿಲ್ಲಾ ಮಟ್ಟದ ಸಹಾಯವಾಣಿ ಸಂಖ್ಯೆ ೯೪೮೦೮೭೨೦೦೫ ಗೆ ಸಂಪರ್ಕಿಸಬಹುದಾಗಿದೆ. ತಾಲ್ಲೂಕು ಮಟ್ಟದಲ್ಲಿಯೂ ಸಂಬಂಧಿತ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳ ಮೂಲಕ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಇದಲ್ಲದೇ, ಪ್ರತಿ ಸೋಮವಾರ ಜಿಲ್ಲೆಯ ಎಲ್ಲಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರು ಸರಬರಾಜಿನ ಸ್ಥಿತಿಗತಿ ಹಾಗೂ ಸಮಸ್ಯೆಗಳ ಕುರಿತು ಸಮಗ್ರವಾಗಿ ಪರಿಶೀಲನೆ ಮತ್ತು ಚರ್ಚೆ ನಡೆಸಲಾಗುತ್ತಿದೆ. ಅದೇ ರೀತಿ ತಾಲ್ಲೂಕು ಹಂತದಲ್ಲಿಯೂ ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಮನ್ವಯ ಸಭೆಗಳನ್ನು ನಡೆಸಿ, ಕುಡಿಯುವ ನೀರು ಸರಬರಾಜು ಸಮಸ್ಯೆಗಳ ಕುರಿತು ಚರ್ಚಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಡವಳಿಯನ್ನು ಜಿಲ್ಲಾ ಪಂಚಾಯ್ತಿಗೆ ನಿಯಮಿತವಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಯೋಜನಾ ನಿರ್ದೇಶಕರಾದ ಸುಂದರ್ ರಾಜ್, ಜಿಲ್ಲೆಯ ಎಲ್ಲಾ ತಾಪಂ ಇಒಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಜಿಲ್ಲೆಯ ಎಲ್ಲಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ವಿಡಿಯೋ ಸಂವಾದದ ಮೂಲಕ ಹಾಜರಿದ್ದರು.