ಭಾಷೆ ಎನ್ನುವುದು ಮಾನವ ಅಭಿವೃದ್ಧಿಯ ಪ್ರಮುಖ ಅಂಶ. ಅವಕಾಶಗಳನ್ನು ಪಡೆದುಕೊಳ್ಳುವುದಕ್ಕೆ ಭಾಷೆ ಪೂರಕ ಸಾಧನವಾಗಿದೆ. ‘ಭಾಷೆಯ ಸುತ್ತ’ ಕೃತಿಯು ವಿಭಿನ್ನ ಪ್ರಯತ್ನವಾಗಿದೆ. ಭಾಷೆ ಪ್ರತಿಯೊಬ್ಬರಿಗೂ ಮುಖ್ಯವಾದ ಆಯಾಮವಾಗಿದ್ದು, ಭಾಷೆಯ ಮಹತ್ವವನ್ನು ಅರಿತು ಅದನ್ನು ಸರಿಯಾಗಿ ಬಳಸುವ ಕೌಶಲ್ಯವನ್ನು ಪ್ರತಿಯೊಬ್ಬರೂ ಸಂಪಾದಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಭಾಷೆ ಪ್ರತಿಯೊಬ್ಬರಿಗೂ ಮುಖ್ಯವಾದ ಆಯಾಮ. ಎಷ್ಟೋ ಸಂದರ್ಭಗಳಲ್ಲಿ ನಾವು ಕನ್ನಡ ಭಾಷೆಯನ್ನು ಸಮರ್ಪಕವಾಗಿ ಮಾತನಾಡುತ್ತಿಲ್ಲ. ವ್ಯವಹರಿಸುತ್ತಲೂ ಇಲ್ಲ. ಇದು ಅತ್ಯಂತ ನೋವಿನ ವಿಚಾರ. ಭಾಷೆಯ ಬಗ್ಗೆ ಪ್ರತಿಯೊಬ್ಬರಿಗೂ ಪ್ರೀತಿ-ಅಭಿಮಾನ ಇರಬೇಕು ಎಂದು ಮಂಡ್ಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಹೇಳಿದರು.
ಮಂಡ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಪ್ರಸಾರಂಗದಿಂದ ಡಾ.ಸುಮಾರಾಣಿ ಶಂಭು ಬರೆದಿರುವ ಬಿ.ಇಡಿ ಪಠ್ಯ ಕ್ರಮಾನುಸಾರ ಭಾಷೆಯ ಸುತ್ತ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಾಷೆ ಎನ್ನುವುದು ಮಾನವ ಅಭಿವೃದ್ಧಿಯ ಪ್ರಮುಖ ಅಂಶ. ಅವಕಾಶಗಳನ್ನು ಪಡೆದುಕೊಳ್ಳುವುದಕ್ಕೆ ಭಾಷೆ ಪೂರಕ ಸಾಧನವಾಗಿದೆ. ‘ಭಾಷೆಯ ಸುತ್ತ’ ಕೃತಿಯು ವಿಭಿನ್ನ ಪ್ರಯತ್ನವಾಗಿದೆ. ಭಾಷೆ ಪ್ರತಿಯೊಬ್ಬರಿಗೂ ಮುಖ್ಯವಾದ ಆಯಾಮವಾಗಿದ್ದು, ಭಾಷೆಯ ಮಹತ್ವವನ್ನು ಅರಿತು ಅದನ್ನು ಸರಿಯಾಗಿ ಬಳಸುವ ಕೌಶಲ್ಯವನ್ನು ಪ್ರತಿಯೊಬ್ಬರೂ ಸಂಪಾದಿಸಬೇಕು. ಇದರಿಂದ ಭಾಷೆಯ ಮಹತ್ವ, ಘನತೆ-ಗೌರವಗಳು ಹೆಚ್ಚುತ್ತವೆ ಎಂದರು.
ಇತ್ತೀಚಿನ ಯುವಜನರಲ್ಲಿ ಪುಸ್ತಕ ಸಂಸ್ಕೃತಿ ಮತ್ತು ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಇಂತಹ ಸಮಯದಲ್ಲಿ ಡಾ.ಪಿ.ಸುಮಾರಾಣಿ ಶಂಭು ಅವರು ’ಭಾಷೆಯ ಸುತ್ತ’ ಕೃತಿಯ ಮೂಲಕ ವಿದ್ಯಾರ್ಥಿಗಳಿಗೆ ಪೂರಕ ಮಾಹಿತಿ ನೀಡಿದ್ದಾರೆ. ಪುಸ್ತಕ ಬರವಣಿಗೆ ಸುಲಭವಾದ ಆಯಾಮವಲ್ಲ. ಬರಹಗಾರನಿಗೆ ಬರಹದ ಬಗ್ಗೆ ಕಾಳಜಿ ಇರಬೇಕು. ಅಧ್ಯಯನಶೀಲತೆ ಇರಬೇಕು. ಅಧ್ಯಾಪಕರಾದವರು ಜ್ಞಾನವನ್ನು ಸಂಪಾದಿಸಬೇಕು. ಪುಸ್ತಕ ಪ್ರೀತಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್‌ಬಿಇಟಿ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅವರು ಡಾ.ಸುಮಾರಾಣಿ ಶಂಭು ಬರೆದಿರುವ ’ಭಾಷೆಯ ಸುತ್ತ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ’ಭಾಷೆಯ ಸುತ್ತ’ ಪುಸ್ತಕ ಪ್ರಶಿಕ್ಷಣಾರ್ಥಿಗಳಿಗೆ ಕೈಪಿಡಿಯಾಗಿದೆ. ಈ ಕೃತಿ ಸಂಶೋಧನೆಯಿಂದ ಕೂಡಿದೆ. ಈ ಪುಸ್ತಕವು ಅನೇಕ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಿದೆ. ಕೃತಿಯಲ್ಲಿ ಭಾಷೆಯ ಮಹತ್ವದ ಬಗ್ಗೆ ವಿವರವಿದೆ ಎಂದರು.
ಭಾವನೆ ಇಲ್ಲದೆ ಅಕ್ಷರ ಮೂಡಲಾರದು. .ಭಾಷೆಯನ್ನು ಕೌಶಲ್ಯತೆಯಿಂದ ಬಳಸಬೇಕು. ಈ ನಿಟ್ಟಿನಲ್ಲಿ ’ಭಾಷೆಯ ಸುತ್ತ’ ಕೃತಿ ವಿದ್ಯಾರ್ಥಿಗಳ ಆಲೋಚನೆಗೆ ಆಸ್ಪದ ನೀಡುವ ಕೃತಿಯಾಗಿದೆ ಎಂದರು.
ಕೃತಿ ಕುರಿತು ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಬಿ .ಶಂಕರಗೌಡ ಮಾತನಾಡಿದರು.
ಇದೇ ಸಂದರ್ಭದಲ್ಲಿ ಲೇಖಕಿ ಸುಮಾರಾಣಿ ಅವರನ್ನು ಮಂಡ್ಯ ವಿಶ್ವವಿದ್ಯಾಲಯದ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಂಡ್ಯ ವಿವಿಯ ಪ್ರಸಾರಂಗ ನಿರ್ದೇಶಕ ಪ್ರೊ.ಎಸ್.ಚಂದ್ರಕಿರಣ್, ಮೌಲ್ಯಮಾಪನ ಕುಲಸಚಿವರಾದ ಪ್ರೊ. ವೆಂಕಟರಮಣ, ಭಾರತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಎಲ್.ಸುರೇಶ್, ಸಿಂಡಿಕೇಟ್ ಸದಸ್ಯರಾದ ನಾಗರಾಜು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.