ಕನ್ನಡಪ್ರಭ ವಾರ್ತೆ ಮಂಡ್ಯ
ಮಾ.೬ರಂದೇ ಜಿಲ್ಲಾ ಕುರುಬರ ಸಂಘದ ಆಡಳಿತ ಮಂಡಳಿ ಅವಧಿ ಮುಗಿದಿದ್ದರೂ ಅಧ್ಯಕ್ಷ ಎಂ.ಸುರೇಶ್ ರಾಜೀನಾಮೆ ನೀಡದೆ ಮೊಂಡಾಟ ಪ್ರದರ್ಶಿಸುತ್ತಿದ್ದರು. ಸಹಕಾರ ಸಂಘಗಳ ಉಪ ನಿಬಂಧಕರಿಗೆ ಸುಳ್ಳು ಮಾಹಿತಿ ನೀಡಿ ಹಿಂದಿನ ಆಡಳಿತ ಮಂಡಳಿಯೇ ಅಧಿಕಾರದಲ್ಲಿ ಮುಂದುವರೆಯಲಿದೆ ಎಂಬ ಬಗ್ಗೆ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದರು. ರಾಜಕೀಯ ಪ್ರಭಾವ ಬಳಸಿ ಅಧಿಕಾರದಲ್ಲಿ ಮುಂದುವರೆಯುವ ಪ್ರಯತ್ನ ನಡೆಸಿದ್ದರು.
ಸಂಘಕ್ಕೆ ಚುನಾವಣೆ ನಡೆಸುವ ವಿಚಾರವಾಗಿ ಅಧ್ಯಕ್ಷ ಎಂ.ಸುರೇಶ್ ನೇತೃತ್ವದ ಬಣ ಮತ್ತು ವಿರೋಧಿ ಬಣಗಳ ನಡುವೆ ಆರೋಪ-ಪ್ರತ್ಯಾರೋಪ, ಪರಸ್ಪರ ವಾಕ್ಸಮರ ಕೂಡ ಜೋರಾಗಿ ನಡೆದಿತ್ತು. ಇತ್ತೀಚೆಗೆ ಸಂಘದ ಆವರಣದಲ್ಲೇ ಅಧ್ಯಕ್ಷ ಸುರೇಶ್ ಅವರನ್ನ ಅಡ್ಡಗಟ್ಟಿದ್ದ ಗುಂಪೊಂದು ಅವರ ಮೇಲೆ ಕಪ್ಪು ಮಸಿ ಎರಚಿ ತಮ್ಮ ಆಕ್ರೋಶ ಹೊರಹಾಕಿತ್ತು. ಸುರೇಶ್ ಅವರ ಏಕಪಕ್ಷೀಯ ನಡೆ ವಿರುದ್ಧ ದನಿ ಎತ್ತಿದ್ದ ನಾಲ್ವರು ನಿರ್ದೇಶಕರನ್ನು ಆಡಳಿತ ಮಂಡಳಿಯಿಂದ ವಜಾ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳ ವಿರುದ್ಧ ಸಂಘದ ಮಾಜಿ ನಿರ್ದೇಶಕ ಹಾರೋಹಳ್ಳಿ ಎ.ಕೃಷ್ಣ ನೇತೃತ್ವದ ಆರು ಜನರ ತಂಡ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಂಡ್ಯ ಜಿಲ್ಲಾ ಕುರುಬರ ಸಂಘ ನಡೆ ಕಾನೂನುಬಾಹಿರವಾಗಿದೆ. ಅದಕ್ಕೆ ಪೂರಕವಾಗಿ ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಮಾಡಿರುವ ಕಾನೂನುಬಾಹಿರ ಆದೇಶಕ್ಕೆ ತಡೆ ನೀಡಿದೆ.
ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಈ ಕೂಡಲೇ ಸಂಘದ ಎಲ್ಲ ದಾಖಲಾತಿಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬೇಕು. ಆ ದಾಖಲಾತಿಗಳನ್ನು ಪರಿಶೀಲನೆ ಮಾಡಿ, ಆಡಳಿತ ಮಂಡಳಿಯ ಅವಧಿ ಮುಗಿದಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಬೇಕು. ಒಂದು ವೇಳೆ ಸಂಘದ ಆಡಳಿತ ಮಂಡಳಿಯ ಅವಧಿಯು ಮುಗಿದಿದೆ ಎಂಬುದು ಕಂಡುಬಂದರೆ ಎಲ್ಲ ಅವಶ್ಯಕ ಕ್ರಮಗಳನ್ನ ತೆಗೆದುಕೊಳ್ಳಲು ಸಂಘದ ಸರ್ವ ಸದಸ್ಯರ ಸಭೆ ಕರೆಯಲು ಹಾಗೂ ಸಂಘದ ಮುಂದಿನ ೫ ವರ್ಷಗಳ ಅವಧಿಗೆ ಆಡಳಿತ ಮಂಡಳಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವುದು. ಚುನಾವಣೆಯನ್ನು ಕಾನೂನು ರೀತ್ಯಾ ನಡೆಸಿ ಚುನಾವಣಾ ಪ್ರಕ್ರಿಯೆಯನ್ನು ಮುಗಿಸಲೇಬೇಕೆಂಬ ಕಟ್ಟುನಿಟ್ಟಾದ ಆದೇಶವನ್ನು ಏ.೧೭ರಂದು ರಾಜ್ಯ ಉಚ್ಚ ನ್ಯಾಯಾಲಯ ಹೊರಡಿಸಿದೆ.ಹೈಕೋರ್ಟ್ ಆದೇಶ ಸಂಘದ ಸರ್ವ ಸದಸ್ಯರಿಗೆ ಸಂದ ಜಯ
ಇದೊಂದು ಐತಿಹಾಸಿಕ ತೀರ್ಪು. ಕಾನೂನುಬಾಹಿರವಾಗಿ ಹೋಗುವ ಪ್ರತಿಯೊಬ್ಬರಿಗೂ ಇದು ಎಚ್ಚರಿಕೆ ಘಂಟೆ. ನ್ಯಾಯದ ಪರ ದನಿ ಎತ್ತಿದ ನಮ್ಮನ್ನ ಉಚ್ಚಾಟಿಸಿ, ಸಂಘ ವಿರೋಧಿ ಪಟ್ಟ ಕಟ್ಟಿದ್ದರು. ಅಧಿಕಾರ ಶಾಶ್ವತ ಅಲ್ಲ. ಕಾನೂನಿನಡಿ ಎಲ್ಲರೂ ಒಂದೇ. ಕಾನೂನಿನ ಮುಂದೆ ರಾಜಕೀಯ ಪ್ರಭಾವ, ಹಣ, ಅಧಿಕಾರದ ಮದ ನಡೆಯುವುದಿಲ್ಲ ಎಂಬುದನ್ನ ಸಾಬೀತು ಮಾಡಿದೆ. ಈ ತೀರ್ಪು ಸಂಘದ ಸರ್ವ ಸದಸ್ಯರಿಗೆ ಸಂದ ಜಯ. ಈಗಲಾದರೂ ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಕೋರ್ಟ್ ಆದೇಶಕ್ಕೆ ತಲೆಬಾಗಬೇಕು. ಕೋರ್ಟ್ ಆದೇಶದಂತೆ ಸಂಘದ ಎಲ್ಲಾ ದಾಖಲಾತಿಗಳನ್ನ ತಮ್ಮ ವಶಕ್ಕೆ ಪಡೆದು, ಕಾನೂನಿನ ಪ್ರಕಾರ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಜೆ.ಶಶಿಧರ್ ಎಂಬುವವರು ಕಾನೂನು ಹೋರಾಟ ಮಾಡಲಿ ಎಂದು ಸವಾಲು ಹಾಕಿದ್ದರು. ಅದರಂತೆ ಕಾನೂನು ಮೂಲಕವೇ ಅವರಿಗೆ ಉತ್ತರ ಕೊಟ್ಟಿದ್ದೇವೆ. ಕಾನೂನಿನ ಮೇಲೆ ಅವರಿಗೆ ಕಿಂಚಿತ್ತಾದರೂ ಗೌರವ ಇದ್ದರೆ ಚುನಾವಣೆಯಲ್ಲಿ ನಿಂತು ಗೆದ್ದು ಬರಲಿ. ಇನ್ನು ಇವರ ಅಧಿಕಾರವಧಿಯಲ್ಲಿ ದಾನಿಗಳು, ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ನೀಡಿರುವ ದಾನದ ರೂಪದ ದೇಣಿಗೆ ಹಣದ ವಿವರ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.