ಗ್ರಾಮಗಳಲ್ಲಿ ಕುಡಿವ ನೀರು ತೊಂದರೆ ಆಗದಂತೆ ಎಚ್ಚರ ವಹಿಸಿ: ಶಾಂತನಗೌಡ

KannadaprabhaNewsNetwork |  
Published : Apr 29, 2026, 01:30 AM IST
28ಎಚ್.ಎಲ್.ಐ1. ಪಟ್ಟಣದ ಸಾಮರ್ಥ್ಯ ಭವನದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು.ಎಚ್.ಬಿ.ಮಂಜಪ್ಪ, ಅಧಿಕಾರಿಗಳು ಇದ್ದರು. | Kannada Prabha

ಸಾರಾಂಶ

ತಾಲೂಕಿನಾದ್ಯಂತ ತೀವ್ರ ಬೇಸಿಗೆ ವಾತಾವರಣವಿದೆ. ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಗ್ರಾಮ ಪಂಚಾಯಿತಿಗಳ ಪಿ.ಡಿ.ಒ.ಗಳು, ಸಂಬಂಧಿಸಿದ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೊನ್ನಾಳಿಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಹೊನ್ನಾಳಿ: ತಾಲೂಕಿನಾದ್ಯಂತ ತೀವ್ರ ಬೇಸಿಗೆ ವಾತಾವರಣವಿದೆ. ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಗ್ರಾಮ ಪಂಚಾಯಿತಿಗಳ ಪಿ.ಡಿ.ಒ.ಗಳು, ಸಂಬಂಧಿಸಿದ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆಲವು ಗ್ರಾಮಗಳಲ್ಲಿ ಗ್ರಾಪಂಗಳ ಬೋರ್‌ಗಳಲ್ಲಿ ಅಂತರ್ಜಲ ಕಡಿಯಾಗಿದ್ದರೆ ಸಂಬಂಧಿಸಿದ ಪಿಡಿಒಗಳು ಬಾಡಿಗೆ ಆಧಾರದ ಮೇಲೆ ಸ್ಥಳೀಯವಾಗಿ ಖಾಸಗಿ ಬೋರ್‌ವೆಲ್‌ ಮಾಲೀಕರ ಮನವೊಲಿಸಿ ನೀರು ಪಡೆಯಲು ಸಲಹೆ ನೀಡಿದರು.

ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆ ವೈದ್ಯರ ಕರ್ತವ್ಯ ವಿರುದ್ಧ ಸಾರ್ವಜನಿಕ ದೂರುಗಳು ಬರುತ್ತಿವೆ. ತಾಲೂಕು ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆ ಆಡಳಿತಾಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಪುನಃ ದೂರುಗಳು ಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಬಗರ್‌ಹುಕುಂ ಸಮಿತಿ ಸದಸ್ಯ ಕೊಡತಾಳ್ ರುದ್ರೇಶ್ ಮಾತನಾಡಿ, ಸಾರ್ವನಿಕ ಆಸ್ಪತ್ರೆ ಅವ್ಯವಸ್ಥೆ ಆಗರವಾಗಿದೆ. ಒಂದು ಹೆರಿಗೆ ಮಾಡಿಸಲು ಹಾಗೂ ಶಸ್ತ್ರಚಿಕತ್ಸೆಗೆ ₹6 ರಿಂದ ₹15 ಸಾವಿರವರೆಗೆ ವೈದ್ಯರು ಹಣ ಪಡೆಯುತ್ತಿದ್ದಾರೆ. ನೇತ್ರತಜ್ಞರು ಉತ್ತಮವಾಗಿ ರೋಗಿಗಳನ್ನು ಪರೀಕ್ಷಿಸಿ ಕನ್ನಡಕ ಪಡೆಯಲು ನೇತ್ರ ಪರೀಕ್ಷಕನ ಬಳಿ ಕಳಿಸಿದರೆ, ನೇತ್ರ ಪರೀಕ್ಷಕ ಅಸಡ್ಡೆ ತೋರಿಸುವುದಲ್ಲದೇ, ಬಡವರಿಗೆ ಕನ್ನಡಕ ವಿತರಿಸಲು ಹಣ ಪಡೆಯುತ್ತಾರೆ. ಇವುಗಳಿಗೆ ನಾನು ಸಾಕ್ಷಿ ನೀಡಬಲ್ಲೆ ಎಂದು ನೇರವಾಗಿ ಆರೋಪಿಸಿದರು.

ಮಧ್ಯ ಪ್ರವೇಶಿಸಿದ ಶಾಸಕರು ಹಾಗೂ ಬಯಲುಸೀಮೆ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಇದ್ದಂತವರು ಹಾಗೂ ಶ್ರೀಮಂತರು ಚಿಕಿತ್ಸೆಗಾಗಿ ಬರುವುದಿಲ್ಲ. ಇಲ್ಲಿಗೆ ಬರುವವರೆಲ್ಲ ಬಡವರು ಮಾತ್ರ ಯಾವುದೇ ಕಾರಣಕ್ಕೂ ಹಣ ಪಡೆಯದೇ ಉತ್ತಮ ಚಿಕಿತ್ಸೆ ನೀಡಿ ಎಂದು ತಾಕೀತು ಮಾಡಿದರು. ಆಗ ಸಭೆಯಲ್ಲಿದ್ದ ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಹನುಮಂತಪ್ಪ ಮಾತನಾಡಿ, ನಾವು ಹಣ ಪಡೆದಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟರು.

ತಾಲೂಕು ವೈದ್ಯಾಧಿಕಾರಿ ಡಾ.ಗೀರೀಶ್ ಅವರಿಗೆ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ, ನಾವುಗಳು ಸಾರ್ವಜನಿಕರಿಗಾಗಿ ವೈದ್ಯರಿಗೆ ಕರೆ ಮಾಡುತ್ತೇವೆ. ಏಕೆ ಕರೆಗಳನ್ನು ಸ್ವೀಕರಿಸುವುದಿಲ್ಲ ಎಂದು ಎಚ್.ಬಿ.ಮಂಜಪ್ಪ ಖಾರವಾಗಿ ಪ್ರಶ್ನಿಸಿದರು. ಆಗ ತಾಲೂಕು ವೈದ್ಯಾಧಿಕಾರಿ ಡಾ.ಗಿರೀಶ್ ಪ್ರತಿಕ್ರಿಯಿಸಿ, ನೀವು ಕರೆ ಮಾಡಿದಾಗ ದಾವಣಗೆರೆಯಲ್ಲಿ ಡಿಸಿ ಸಭೆಯಲ್ಲಿ ಭಾಗವಹಿಸಿದ್ದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ವಿಶ್ವನಾಥ್ ಇಲಾಖೆ ಪ್ರಗತಿ ವಿವರಿಸಿ, ತಾಲೂಕಿನಲ್ಲಿ ಬೇಸಿಗೆ ಪೂರ್ವ ಮುಂಗಾರು ವಾಡಿಕೆ ಮಳೆ 34 ಮಿ.ಮೀ. ಇದ್ದು, 39 ಮಿ.ಮೀ. ಮಳೆ ಸುರಿದಿದೆ. ನ್ಯಾಮತಿ ತಾಲೂಕಿನಲ್ಲಿ ವಾಡಿಕೆ ಮಳೆ 38 ಮಿ.ಮೀ. ಇದ್ದು, ಇದುವರೆಗೆ 68 ಮಿ.ಮೀ. ಮಳೆ ಬಿದ್ದಿದೆ. ನೀರಾವರಿ ಜಮೀನಿನ ಬೇಸಿಗೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಯೂರಿಯ ಕಾಂಪೋಸ್ಟ್, ಡಿಎಪಿ ಸೇರಿದಂತೆ ಇತರ ಗೊಬ್ಬರಗಳ ದಾಸ್ತಾನು ಮಾಡಲಾಗಿದೆ ಎಂದರು.

ಸುಂಕದಕಟ್ಟೆ, ಹೊಸಕಟ್ಟೆ, ಅರಬಗಟ್ಟೆ, ಬಲಮುರಿ ಗ್ರಾಮಗಳ ಬೋರ್‌ಗಳಲ್ಲಿ ನೀರು ಕಡಿಮೆಯಾಗಿ ತೊಂದರೆಯಾಗಿದೆ. ತಕ್ಷಣ ಸಂಬಂಧಪಟ್ಟ ಪಿಡಿಒಗಳು ಹಾಗೂ ಆಡಳಿತಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ತಿಳಿಸಿದರು.

ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿರುವುದಲ್ಲದೆ ಧೂಳು ಹಿಡಿದಿವೆ ಗ್ರಾಪಂ ಪಿಡಿಒಗಳು ಇನ್ನೊಂದು ವಾರದಲ್ಲಿ ಶುದ್ಧಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಿಸಬೇಕು. ತಪ್ಪಿದಲ್ಲಿ ಜಿ.ಪ. ಸಿಇಒಗೆ ಕ್ರಮ ಕೈಗೊಳ್ಳಳು ಸೂಚಿಸಲಾಗುವುದು ಎಂದು ಅಧ್ಯಕ್ಷ ಎಚ್.ಬಿ.ಮಂಜಪ್ಪ ಹೇಳಿದರು.

ಬಿಇಒ ಕೆ.ಟಿ.ನಿಂಪ್ಪ, ಸಿಡಿಪಿಒ ಜ್ಯೋತಿ, ಬೆಸ್ಕಾಂ ಎಂಜಿನಿಯರ್ ಶ್ರೀನಿವಾಸ್, ಲೋಕೋಪಯೋಗಿ ಎಇಇ ಕಣುವಪ್ಪ, ಗ್ರಾಮೀಣ ಕುಡಿಯುವ ನೀರು ಯೋಜನೆ ಎಇಇ ಸೊಮ್ಲಾನಾಯ್ಕ, ತಾಲೂಕು ಅಧಿಕಾರಿಗಳು ಇಲಾಖೆಗಳ ಪ್ರಗತಿ ವರದಿ ಒಪ್ಪಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ, ಉಪ ವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ತಹಸೀಲ್ದಾರ್ ರಾಜೇಶ್ ಕುಮಾರ್, ಹೊನ್ನಾಳಿ ತಾಪಂ ಇಒ ಡಿ.ಜಿ.ಅಶೋಕ್, ನ್ಯಾಮತಿ ತಾಪಂ ಇಒ ರಾಘವೇಂದ್ರ ಇತರರು ಇದ್ದರು.

- - -

-28ಎಚ್.ಎಲ್.ಐ1:

ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು. ಎಚ್.ಬಿ.ಮಂಜಪ್ಪ, ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಸಮಸ್ಯೆ ಅರಿತು ಪರಿಹರಿಸಲು ಪ್ರಯತ್ನಿಸಿ: ದರ್ಶನ್ ಪುಟ್ಟಣ್ಣಯ್ಯ
ಸಾರಿಗೆ ಬಸ್‌ಗಳ ಕೆಲ ನಿರ್ವಾಹಕರಿಂದ ಶಕ್ತಿ ಯೋಜನೆ ದುರ್ಬಳಕೆ: ಮೂಡ್ಲೀಗೌಡ