ಮಹಿಳಾ ಮೀಸಲಾತಿ ವಿರೋಧಿಸಿದ್ದ ಕಾಂಗ್ರೆಸ್ ನಡೆ ಖಂಡಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Apr 29, 2026, 01:30 AM IST
ಬಿಜೆಪಿ  | Kannada Prabha

ಸಾರಾಂಶ

ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ರ‍್ಯಾಲಿ ನಗರದ ಪ್ರಮುಖ ವೃತ್ತಗಳಲ್ಲಿ ಬಿರುಬಿಸಿಲಿನಲ್ಲೂ ಸಾಗಿ ಬಂದು ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲೂಕು ಕಚೇರಿ ಮುಂಭಾಗ ಕುಳಿತು ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.

ಕನನಪ್ರಭ ವಾರ್ತೆ ಚಿಂತಾಮಣಿ

ಕೇಂದ್ರ ಸರ್ಕಾರದ ಐತಿಹಾಸಿಕ ನಾರಿಶಕ್ತಿ ವಂದನ್ ಅಧಿನಿಯಮ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಗೆ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ವಿರೋಧಿಸಿ ಬಿಜೆಪಿ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಬಿಜೆಪಿ ಎಂಎಲ್‌ಸಿ ಭಾರತಿ ಶೆಟ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತನಾಡಿ, ಮಹಿಳಾ ಮೀಸಲಾತಿಯನ್ನು ಮೂಲೆಗುಂಪು ಮಾಡಿದ್ದ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಈಗ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಜಾರಿಗೆ ತರಲು ಮುಂದಾಗುತ್ತಿದ್ದರೆ ಅದಕ್ಕೆ ತಾಂತ್ರಿಕ ಅಡೆತಡೆಗಳನ್ನು ಒಡ್ಡುವ ಮೂಲಕ ಮಹಿಳೆಯರಿಗೆ ಅನ್ಯಾಯ ವೆಸಗಲು ಕಾಂಗ್ರೆಸ್ ಮುಂದಾಗುತ್ತಿರುವುದು ಖಂಡನೀಯವೆಂದರು.

ತಹಸೀಲ್ದಾರ್ ವಿರುದ್ಧ ಆಕ್ರೋಶ;

ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡುತ್ತಿದ್ದರೂ, ಕನಿಷ್ಠ ಸೌಜನ್ಯಕ್ಕಾದರೂ ಬಂದು ಮನವಿ ಸ್ವೀಕರಿಸದ ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿದರು.

ಮೊಬೈಲ್ ಕರೆ ಮಾಡಿ ತಹಸೀಲ್ದಾರರನ್ನು ಮಾತನಾಡಿಸಿದ ಭಾರತಿ ಶೆಟ್ಟಿರವರು ತಹಸೀಲ್ದಾರರ ಕಾರ್ಯವೈಖರಿಯನ್ನು ಪ್ರಶ್ನಿಸಿ, ನೀವು ಜನಸೇವಕರು ಎಂಬುದು ನೆನಪಿನಲ್ಲಿಟ್ಟುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆಂದು ಎಚ್ಚರಿಕೆ ಮಾತುಗಳನ್ನಾಡಿದರು.

ತಾಲೂಕಿನಲ್ಲಿ ಮಹಿಳೆಯರ ಸಮಸ್ಯೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯವನ್ನು ಕಟುವಾಗಿ ಟೀಕಿಸಿದರು.

ಬಿಜೆಪಿ ಮುಖಂಡ ಜಿ.ಎನ್.ವೇಣುಗೋಪಾಲ್ ಮಾತನಾಡಿ, ಸಾಂವಿಧಾನಿಕವಾಗಿ ನಡೆಯಬೇಕಾದ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ರಾಜಕೀಯ ಲಾಭ- ನಷ್ಟದ ದೃಷ್ಟಿಕೋನದಲ್ಲಿ ನೋಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆಯೆಂದು ಆರೋಪಿಸಿದರು. ಮಹಿಳೆಯರ ಸಬಲೀಕರಣಕ್ಕಾಗಿ ತಂದಿರುವ ಐತಿಹಾಸಿಕ ತೀರ್ಪುಗಳಿಗೆ ಸಹಮತವನ್ನು ವ್ಯಕ್ತಪಡಿಸದಿರುವುದು ಖಂಡನೀಯವಾಗಿದೆಯೆಂದರು.

ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ರ‍್ಯಾಲಿ ನಗರದ ಪ್ರಮುಖ ವೃತ್ತಗಳಲ್ಲಿ ಬಿರುಬಿಸಿಲಿನಲ್ಲೂ ಸಾಗಿ ಬಂದು ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲೂಕು ಕಚೇರಿ ಮುಂಭಾಗ ಕುಳಿತು ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜಣ್ಣ, ನಗರ ಮಂಡಲ ಅಧ್ಯಕ್ಷ ಗೋವಿಂದರಾಜು, ಗಾಜಲ ಶಿವ, ಗೋಕುಲ್ ಶ್ರೀನಿವಾಸ್, ನಿಕಟಪೂರ್ವ ಅಧ್ಯಕ್ಷ ಮಹೇಶ್ ಬೈ, ಕೆ.ಎಂ. ರಾಜಶೇಖರರೆಡ್ಡಿ, ಬನಹಳ್ಳಿ ಬಿ.ಎನ್.ಮಂಜುನಾಥ್, ಶೃತಿ, ರೋಹಿಣಿ, ಗೌತಮಿ, ದೇವರಾಜ್, ಕರಕಮಾಕಲಹಳ್ಳಿ ದೇವರಾಜ್, ಆಂಜಪ್ಪ, ಪಂಕಜಾ ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳು ಸೇರಿದಂತೆ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಸಮಸ್ಯೆ ಅರಿತು ಪರಿಹರಿಸಲು ಪ್ರಯತ್ನಿಸಿ: ದರ್ಶನ್ ಪುಟ್ಟಣ್ಣಯ್ಯ
ಸಾರಿಗೆ ಬಸ್‌ಗಳ ಕೆಲ ನಿರ್ವಾಹಕರಿಂದ ಶಕ್ತಿ ಯೋಜನೆ ದುರ್ಬಳಕೆ: ಮೂಡ್ಲೀಗೌಡ