ಕಲಘಟಗಿ: ಪ್ರತಿಯೊಬ್ಬರೂ ಆರೋಗದ ಬಗ್ಗೆ ಕಾಳಜಿ ವಹಿಸಿ ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಹೇಳಿದರು.
ತಾಲೂಕಿನ ಬೇಗೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಹಾಗೂ ಭಾರತೀಯ ವೈದ್ಯಕೀಯ ಸಂಘ ಹುಬ್ಬಳ್ಳಿ ಸಹಯೋಗದಲ್ಲಿ ತಜ್ಞ ವೈದ್ಯರಿಂದ ಬೃಹತ್ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಮಾತನಾಡಿದರು.ಜೋಶಿಯವರ ಕ್ಷಮತಾ ಸೇವಾ ಸಂಸ್ಥೆಯಿಂದ ತಾಲೂಕಿನ ಹಲವು ಗ್ರಾಮಗಳಲ್ಲಿ ಸೇವಾ ಮನೋಭಾವದಿಂದ ಜನರ ಅನುಕೂಲಕ್ಕಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸುತ್ತ ಬರುತ್ತಿದ್ದಾರೆ ಎಂದರು.
ಶಿಬಿರದಲ್ಲಿ ಇಕೊ ಕಾರ್ಡಿಯೋಗ್ರಾಫಿ, ಇ.ಸಿ.ಜಿ., ಸಕ್ಕರೆ ಕಾಯಿಲೆ, ರಕ್ತದೊತ್ತದಡ, ಕಣ್ಣಿನ ತಪಾಸಣೆ ಇನ್ನಿತರ ರೋಗದ ಬಗ್ಗೆ ನುರಿತ ವೈದ್ಯರು ತಪಾಸಣೆ ಮಾಡಿ ಔಷಧಿ, ಮಾತ್ರೆ ನೀಡಿದರು.ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ
ಸೋಮವಾರ ನಾವೆಲ್ಲರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಪ್ರತಿಷ್ಠಾಪನೆಯ ಐತಿಹಾಸಿಕ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ. ಇಡಿ ಜಗತ್ತೇ ನಮ್ಮ ಭಾರತ ದೇಶದ ಕಡೆ ತಿರುಗಿ ನೋಡುವ ಸಂತೋಷದ ಕ್ಷಣ ಎಂದರು.ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕಾರ್ಯಕರ್ತರು ಈಗಾಗಲೇ ಮಂತ್ರಾಕ್ಷತೆ, ಶ್ರೀರಾಮನ ಕೇಸರಿ ಧ್ವಜ ಮನೆ ಮನೆಗೆ ನೀಡಲಾಗಿದೆ. ಮನೆಯ ಮುಂದೆ ಹಲವು ತಾಯಂದಿರು ರಂಗೋಲಿ ಹಾಕುವುದು ಒಟ್ಟಾರೆ ಶ್ರೀರಾಮನ ಜಪ-ತಪಗಳು, ಭಜನೆ ಇನ್ನೂ ಹಲವು ಕಾರ್ಯಕ್ರಮ ಸ್ವಂತ ಹಿತಾಸಕ್ತಿ ಮೇರೆಗೆ ನಡೆಯುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಗೋವಿಂದ ಜೋಶಿ, ಐ.ಸಿ. ಗೋಕುಲ, ಪರಶುರಾಮ ರಜಪೂತ, ಕಿರಣ್ ಪಾಟೀಲ್ ಕುಲಕರ್ಣಿ, ಅಣ್ಣಪ್ಪ ಓಲೇಕಾರ, ಬಸವಣ್ಣಯ್ಯ ಹಿರೇಮಠ, ವಜ್ರಕುಮಾರ್ ಮಾದನಭಾವಿ, ಗ್ರಾಪಂ ಉಪಾಧ್ಯಕ್ಷ ಶಂಕ್ರಪ್ಪ ಬೋಳಣ್ಣವರ, ಸದಸ್ಯ ನಿಂಗಪ್ಪ ಸುಳ್ಳದ ಗುರು ಮೂಗಣ್ಣವರ, ಬಸವರಾಜ್ ಮೇಟಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.