ರಾಣಿಬೆನ್ನೂರು: ಯಾಂತ್ರಿಕೃತ ಬದುಕಿನಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ ಎಂದು ತಹಸೀಲ್ದಾರ್ ಆರ್.ಎಚ್. ಭಾಗವಾನ ತಿಳಿಸಿದರು.
ನಗರದ ಶಕುಂತಲಾಬಾಯಿ ಮಧುಸಾ ಪವಾರ ಸಭಾಭವನದಲ್ಲಿ ಎಂ.ಕೆ. ಪವಾರ ಮೆಮೋರಿಯಲ್ ಸೊಸೈಟಿ, ಅಮೃತಂ ಆಸ್ಪತ್ರೆ, ರೋಟರಿ ಕ್ಲಬ್, ದಾವಣಗೆರೆ ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಪಿ.ಜಿ. ಸೆಂಟರ್, ಮುಂಬೈನ ಗುಫಿಕ್ ಬಯೋ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಎಲುಬು ಸಾಂದ್ರತೆ ಪರೀಕ್ಷೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಿರಿವಂತರು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ ಬಡವರಿಗೆ ಇಂತಹ ಶಿಬಿರಗಳಿಂದ ಅನುಕೂಲವಾಗುತ್ತದೆ ಎಂದರು.ಡಾ. ನಾರಾಯಣ ಪವಾರ ಮಾತನಾಡಿ, ಸಮಸ್ಯೆ ಬಂದ ಮೇಲೆ ತೊಂದರೆ ಪಡುವುದಕ್ಕಿಂತ ಅದು ಬಾರದಂತೆ ಮುಂಜಾಗ್ರತೆ ವಹಿಸುವುದು ಒಳಿತು ಎಂಬ ಮಾತು ಎಲ್ಲ ಕ್ಷೇತ್ರಗಳಲ್ಲಿಯೂ ಬಳಕೆಯಲ್ಲಿದೆ. ಈ ಮಾತು ಎಲುಬು ಮತ್ತು ಕೀಲುಗಳ ಆರೋಗ್ಯಕ್ಕೂ ಸಂಬಂಧಿಸುತ್ತದೆ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ 30ರಿಂದ 35 ವರ್ಷದೊಳಗೆ ಎಲುಬಿನ ಸಾಂದ್ರತೆ ಆರೋಗ್ಯ ಪೂರ್ಣವಾಗಿರುತ್ತದೆ. ನಿರಂತರ ಧೂಮಪಾನ, ಮದ್ಯಪಾನ ಇತ್ಯಾದಿ ದುರಭ್ಯಾಸಗಳು ಎಲುಬುಗಳನ್ನು ಆದಷ್ಟು ಬೇಗ ಶಿಥಿಲಗೊಳಿಸುತ್ತವೆ. ಹೀಗಾಗಿ ಸಮತೋಲಿತ ಆಹಾರ ಸೇವನೆ, ಊಟದಲ್ಲಿ ಹಸಿರು ಸೊಪ್ಪುಗಳು ಹೆಚ್ಚಾಗಿರುವಂತೆ ಎಚ್ಚರ ವಹಿಸಬೇಕು.ತೂಕ ಹೆಚ್ಚಾಗದಂತೆ ಎಚ್ಚರದಿಂದ ನೋಡಿಕೊಳ್ಳಬೇಕು. ಅದರಲ್ಲೂ ಪ್ರತಿದಿನ ಬೆಳಗಿನ ಹೊತ್ತಿನಲ್ಲಿ ಸೂರ್ಯನ ಕಿರಣಗಳು ದೇಹ ಸ್ಪರ್ಶಿಸುವಂತಾದರೆ ಧಾರಾಳವಾಗಿ ವಿಟಮಿನ್- ಡಿ ದೇಹಕ್ಕೆ ಲಭಿಸುತ್ತದೆ. ಇದರಿಂದ ಸಹಜವಾಗಿಯೇ ಎಲುಬುಗಳಲ್ಲಿ ಚೈತನ್ಯ ತುಂಬಿಕೊಳ್ಳುತ್ತದೆ. ನಾವು ಸೇವಿಸುವ ಆಹಾರಕ್ಕಿಂತಲೂ ಪರಿಸರದಲ್ಲಿ ವಿಟಮಿನ್ ಡಿ ಧಾರಾಳವಾಗಿ ಲಭಿಸುತ್ತದೆ. ಇದರ ಸದುಪಯೋಗದ ಕುರಿತು ಅರಿತರೆ ಒಳ್ಳೆಯದು ಎಂದರು.
ಎಂ.ಕೆ. ಪವಾರ ಮೆಮೋರಿಯಲ್ ಸೊಸೈಟಿ ಅಧ್ಯಕ್ಷ ಕೃಷ್ಣಾಸಾ ಪವಾರ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್‌ನ ಅಧ್ಯಕ್ಷ ಕ್ಯಾಪ್ಟನ್ ಬಿ.ಜೆ. ಹಿರೇಮಠ, ನಗರಸಭೆ ಉಪಾಧ್ಯಕ್ಷ ನಾಗರಾಜ ಪವಾರ, ಟ್ಯಾಗೋರ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಬಸವರಾಜ ಕೇಲಗಾರ, ಗದಿಗೆಪ್ಪ ಹೊಟ್ಟಿಗೌಡರ, ಶಿವಾನಂದ ಸೊಂಡೂರ, ತಜ್ಞ ವೈದ್ಯೆ ಡಾ. ಮಮತಾ ಮುಳಕುಂಪಿಮಠ, ಸಹ ಪ್ರಾಧ್ಯಾಪಕರಾದ ಡಾ. ಸಚಿನ್, ಡಾ. ಹೇಮಂತ್, ಡಾ. ಸಾಗರ, ಉಮೇಶ ಪಟ್ಟಣಶೆಟ್ಟಿ, ಸುಧೀರ ಕುರುವತ್ತಿ ಮತ್ತಿತರರಿದ್ದರು.