ಪಿಯು ಫಲಿತಾಂಶ ಹೆಚ್ಚಳಕ್ಕೆ ಕಾಳಜಿ ವಹಿಸಿ: ಶಾಸಕ ತಮ್ಮಯ್ಯ ಕರೆ

KannadaprabhaNewsNetwork |  
Published : Dec 06, 2025, 01:15 AM IST
ಚಿಕ್ಕಮಗಳೂರಿನ ಲಾಲ್ ಬಹದ್ದೂರ್ ಶಾಸ್ತ್ರೀ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕೊಠಡಿಗಳನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರುಜಿಲ್ಲೆಯ ಪಿಯು ಫಲಿತಾಂಶ ಐದನೇ ಸ್ಥಾನದಿಂದ ಒಂಭತ್ತನೇ ಸ್ಥಾನಕ್ಕೆ ಕೆಳಗಿಳಿದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಿ ಮರಳಿ ಐದನೇ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಸೂಚನೆ ನೀಡಿದರು.

- ಮತ್ತೆ ಐದನೇ ಸ್ಥಾನಕ್ಕೆ ಕೊಂಡೊಯ್ಯಬೇಕು, ಕಾಲೇಜಿನ ನೂತನ ಕೊಠಡಿ ಉದ್ಘಾಟನೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯ ಪಿಯು ಫಲಿತಾಂಶ ಐದನೇ ಸ್ಥಾನದಿಂದ ಒಂಭತ್ತನೇ ಸ್ಥಾನಕ್ಕೆ ಕೆಳಗಿಳಿದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಿ ಮರಳಿ ಐದನೇ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಸೂಚನೆ ನೀಡಿದರು.ನಗರದ ರಾಮನಹಳ್ಳಿಯ ಲಾಲ್ ಬಹದ್ದೂರ್ ಶಾಸ್ತ್ರೀ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪಿಯು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ್ರಾಮಾಣಿಕವಾಗಿ ಕೆಲಸ ಮಾಡುವ ನಂಬಿಕೆಯಿದೆ. ಮುಂದಿನ ಪರೀಕ್ಷಾ ಹಂತಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿ ಜಿಲ್ಲೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಲು ಶ್ರಮಿವಹಿಸಬೇಕು ಎಂದು ಸೂಚಿಸಿದರು.

ನಗರದ ಬಸವನಹಳ್ಳಿ, ಜ್ಯೂನಿಯರ್ ಹಾಗೂ ಎಲ್‌ಬಿಎಸ್ ಪಿಯು ಕಾಲೇಜುಗಳಿಗೆ ಒಳ್ಳೆಯ ಹೆಸರಿದೆ. ಸರ್ಕಾರ ಪರಿಣಿತ ಶಿಕ್ಷಕರು, ಮಕ್ಕಳಿಗೆ ಮೂಲಸೌಕರ್ಯ ಒದಗಿಸುವುದು ಕರ್ತವ್ಯ. ಪಿಯು ವ್ಯಾಸಂಗದ ಮಕ್ಕಳಿಗೆ ಭವಿಷ್ಯದ ದಿಕ್ಕನ್ನು ಬದಲಿ ಸುವ ಸಮಯವಿದು. ಆಸೆ, ಆಕರ್ಷಣೆ ಮತ್ತು ಕೆಟ್ಟ ಚಟಗಳಿಗೆ ಬಲಿಯಾಗದೇ ನಿರಂತರವಾಗಿ ಕಲಿಕೆಗೆ ಒತ್ತು ನೀಡಬೇಕು. ಜೀವನದಲ್ಲಿ ಒಳ್ಳೆಯ ಸಂಸ್ಕಾರ, ನಿಗಧಿತ ಗುರಿ ಹೊಂದಿದ ವಿದ್ಯಾರ್ಥಿ ಮಾತ್ರ ಮುಂದಿನ ದಿನಗಳಲ್ಲಿ ಕಂಡ ಕನಸನ್ನು ಈಡೇರಿಸಿಕೊಂಡು ಸಾಧನೆ ಮೆಟ್ಟಿಲೇರುತ್ತಾರೆ ಎಂದರು.

ಭಾರತೀಯ ಸಂಸ್ಕೃತಿ, ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶಾಲಾ ಶಿಕ್ಷಣ ಆರಂಭಗೊಳ್ಳುವ ಮುನ್ನ ಋಷಿಮುನಿಗಳು ಮಕ್ಕಳಿಗೆ ನದಿದಂಡೆಯಲ್ಲಿ ಪಾಠವನ್ನು ಬೋಧಿಸಿದ್ದರು. ಮಕ್ಕಳು ಸೈನಿಕ, ವೈದ್ಯ ಅಥವಾ ಜನಪ್ರತಿನಿಧಿ ಸೇರಿದಂತೆ ಆಸಕ್ತಿ ಹೊಂದಿರುವ ಗುರಿಯನ್ನಿರಿಸಿ ಭವಿಷ್ಯದ ಹೆಜ್ಜೆ ಹಾಕಬೇಕು ಎಂದು ತಿಳಿಸಿದರು.ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಕೆ.ಮಂಜುಳಾ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸವನ್ನು ಕಡಿಮೆ ದರದಲ್ಲಿ ಸೌಲಭ್ಯ ಕಲ್ಪಿಸುವ ಸರ್ಕಾರಿ ಕಾಲೇಜುಗಳಲ್ಲಿ ಪೂರೈಸಬೇಕು. ಹಿಂದಿನ ಅಥವಾ ಮುಂಬರುವ ವಿದ್ಯಾರ್ಥಿ ಗಳಿಗೆ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಲು ಪಾಲಕರು ಸರ್ಕಾರಿ ಕಾಲೇಜಿನ ವಿದ್ಯಾಭ್ಯಾಸದ ಅನುಬಂಧಕ್ಕೆ ಕಡಿವಾಣ ಹಾಕಬಾರದು ಎಂದು ಹೇಳಿದರು.ಪ್ರಸ್ತುತ ಜಿಲ್ಲೆಯಲ್ಲಿ 93 ಪಿಯು ಕಾಲೇಜುಗಳ ಪೈಕಿ 60 ಕಾಲೇಜುಗಳಿಗೆ ಖುದ್ದು ಭೇಟಿ ನೀಡಿ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಲಾಗಿದೆ. ಸದ್ಯದಲ್ಲೇ ಪೂರ್ಣಪ್ರಮಾಣದ ಭೇಟಿ ಬಳಿಕ ಕಾಲೇಜುಗಳಿಗೆ ಅವಶ್ಯವಿರುವ ಸೌಲಭ್ಯಕ್ಕೆ ಸರ್ಕಾರದೊಂದಿಗೆ ಚರ್ಚಿಸಿ ಅನುದಾನ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.ಸರ್ಕಾರಿ ಕಾಲೇಜು ಯಾವುದೇ ಖಾಸಗೀ ಶಾಲೆಗಿಂತ ಕಡಿಮೆಯಿಲ್ಲ. ಸರಿಸಮಾನಾಗಿ ಕಾರ್ಯನಿರ್ವ ಹಿಸುತ್ತಿದೆ. ಮಕ್ಕಳ ವಿದ್ಯಾಭ್ಯಾಸ ಹಾಗೂ ಮೂಲ ಸವಲತ್ತು ಒದಗಿಸುವುದು ಸರ್ಕಾರದ ಜವಾಬ್ದಾರಿ. ಆ ನಿಟ್ಟಿನಲ್ಲಿ ಎಲ್‌ಬಿಎಸ್ ಕಾಲೇಜು ಪ್ರತಿ ವರ್ಷವು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ ಹೊಂದುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಎಲ್‌ಬಿಎಸ್ ಕಾಲೇಜು ಪ್ರಾಚಾರ್ಯೆ ಎಚ್.ಲೋಲಾಕ್ಷಿ ಮಾತನಾಡಿ, ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾ ಸ ಒದಗಿಸಿರುವ ಕಾಲೇಜಿಗೆ ನೂತನವಾಗಿ ಕೊಠಡಿಗಳ ನಿರ್ಮಾಣ ಮಾಡಿರುವುದು ಖುಷಿತಂದಿದೆ. ಜೊತೆಗೆ ಕಲೆ, ವಿಜ್ಞಾನ, ವಾಣಿಜ್ಯ ವಿಭಾಗ ಲ್ಯಾಬ್, ಗ್ರಂಥಾಲಯಕ್ಕೆ ಕೊಠಡಿಗಳ ಅವಶ್ಯಕತೆಯಿದ್ದು ಈ ಬಗ್ಗೆ ಶಾಸಕರು ಗಮನಹರಿಸಿ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಬಿ.ಪ್ರತೀಪ್ ಮಾತನಾಡಿ, ಇದೀಗ ನಿರ್ಮಾಣ ಗೊಂಡಿರುವ ಕಾಲೇಜಿನ ಕೊಠಡಿ ಸುಮಾರು ₹98 ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡಿದೆ. ಉಳಿದಂತೆ ಕಾಲೇಜಿನ ಇತರೆ ಚಟುವಟಿಕೆಗಳಿಗೆ ಕೊಠಡಿಗಳು ಅವಶ್ಯವಿರುವ ಕಾರಣ ಶಾಸಕರು ಸಹಕರಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಮಂಜುಳಾ, ಲಕ್ಷ್ಮಣ್‌, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಂತೋಷ್ ಲಕ್ಯಾ, ಪುನೀತ್, ಸುನೀಲ್ ಉಪಸ್ಥಿತರಿದ್ದರು. ಉಪನ್ಯಾಸಕ ಅಶ್ವತ್‌ಕುಮಾರ್ ಅರಸ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಚಾರ್ಯೆ ಎಚ್.ಲೋಲಾಕ್ಷಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. 5 ಕೆಸಿಕೆಎಂ 2ಚಿಕ್ಕಮಗಳೂರಿನ ಲಾಲ್ ಬಹದ್ದೂರ್ ಶಾಸ್ತ್ರೀ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕೊಠಡಿಗಳನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆ ಕಟಾವು ಪ್ರಯೋಗ ನಿರ್ಲಕ್ಷಿಸಿದರೆ ಕಠಿಣ ಕ್ರಮ
ಜಿಐ ಟ್ಯಾಗ್ ಉತ್ಪನ್ನಗಳ ಬೆಳವಣಿಗೆಯಿಂದ ಆರ್ಥಿಕ ಸ್ವಾವಲಂಬನೆ