ಮತೀಯ ಶಕ್ತಿಗಳನ್ನು ನಿರ್ದಾಕ್ಷಿಣ್ಯ ಹತ್ತಿಕ್ಕಿ: ಗೃಹ ಸಚಿವ ಡಾ.ಪರಮೇಶ್ವರ್‌ ಸೂಚನೆ

KannadaprabhaNewsNetwork |  
Published : Dec 01, 2024, 01:31 AM IST
ವಸತಿಗೃಹ ಉದ್ಘಾಟಿಸುತ್ತಿರುವ ಡಾ.ಪರಮೇಶ್ವರ್‌ | Kannada Prabha

ಸಾರಾಂಶ

ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಗಳಿದ್ದು, ಶೇ. 45 ರಷ್ಟುಪೊಲೀಸರಿಗೆ ವಸತಿಗೃಹ ನೀಡುವ ಕಾರ್ಯ ಆಗಿದೆ. ಎಲ್ಲರಿಗೂ ವಸತಿಗೃಹ ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ಡಾ. ಪರಮೇಶ್ವರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮುಂಬೈ ಮಹಾನಗರಕ್ಕೆ ಸಮಾನವಾಗಿ ಬೆಳೆಯುವ ಎಲ್ಲ ಅರ್ಹತೆ ದ.ಕ. ಜಿಲ್ಲೆಗೆ ಇದೆ. ಆದರೆ ಅದಕ್ಕೆ ತೊಡಕಾಗಿರುವ ಮತೀಯ ಶಕ್ತಿಗಳನ್ನು ಹತ್ತಿಕ್ಕಿ ಶಾಂತಿಯ ಸಮಾಜ ನಿರ್ಮಿಸುವಲ್ಲಿ ಪೊಲೀಸ್‌ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕು ಎಂದು ಗೃಹ ಸಚಿವ ಡಾ. ಪರಮೇಶ್ವರ್‌ ಸೂಚನೆ ನೀಡಿದ್ದಾರೆ.ನಗರದ ಪೊಲೀಸ್‌ ಲೇನ್‌ನಲ್ಲಿ ಶನಿವಾರ ಮಂಗಳೂರು ನಗರ ಹಾಗೂ ಬೆಳ್ಳಾರೆ ಪೊಲೀಸ್‌ ನೂತನ ವಸತಿ ಗೃಹ ಸಮುಚ್ಛಯ ಮತ್ತು ಸುಬ್ರಹ್ಮಣ್ಯ ಹಾಗೂ ಪಾಣೆಮಂಗಳೂರು ಸಂಚಾರಿ ಪೊಲೀಸ್‌ ಠಾಣೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಗೃಹ ಸಚಿವನಾಗಿ ನಾನು ಅಧಿಕಾರ ಸ್ವೀಕರಿಸಿ ಪ್ರಥಮ ಭೇಟಿ ನೀಡಿದ ಜಿಲ್ಲೆ ದಕ್ಷಿಣ ಕನ್ನಡ. ಆ ಸಂದರ್ಭ ಇಲ್ಲಿನ ವಿವಿಧ ವೃತ್ತಿಪರರರು, ಕೈಗಾರಿಕೋದ್ಯಮಿಗಳು, ಇಲ್ಲಿ ಸಾಕಷ್ಟುಶಿಕ್ಷಣ ಸಂಸ್ಥೆಗಳಿದ್ದರೂ ಇಲ್ಲಿನ ಮಕ್ಕಳು ಬೇರೆ ಕಡೆ ಹೋಗುತ್ತಿರುವ ಬಗ್ಗೆ, ಹೂಡಿಕೆಗೆ ಹೊರಗಿನವರು ಆಸಕ್ತಿ ತೋರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳು ತಮ್ಮ ಸ್ನೇಹಿತೆಯರ ಜತೆ ಕಾಫಿ ಕುಡಿಯಲು ಹೋಗುವುದು ತಪ್ಪು ಎನ್ನುವ ಪರಿಸ್ಥಿತಿ ಇತ್ತು. ಹಾಗಾಗಿ ಇಲ್ಲಿನ ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕಲು ಕಮ್ಯೂನಲ್‌ ಟಾಸ್ಕ್‌ ಫೋರ್ಸ್‌ ರಚನೆ ಮಾಡಿದ್ದೆ. ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಇದರಿಂದಾಗಿ ಶೇ. 50ರಷ್ಟು ಕೋಮು ಸಂಘರ್ಷಗಳನ್ನು ಹತ್ತಿಕ್ಕಲು ಸಾಧ್ಯವಾಗಿದೆ. ಇಲ್ಲಿ ಶಾಂತಿಯಿಂದ ಜನತೆ ಬದುಕುವ ವಾತಾವರಣ ನಿರ್ಮಾಣ ಆಗಬೇಕು ಎಂದರು.

ನಾನು ಚುನಾವಣಾ ಪ್ರಣಾಳಿಕೆ ಮಾಡುವ ಸಂದರ್ಭ ದ.ಕ. ಜಿಲ್ಲೆಯಲ್ಲಿ ಗೋಲ್ಡ್‌ ಆ್ಯಂಡ್‌ ಡೈಮಂಡ್‌ ಸೆಝ್‌ ಮಾಡಬೇಕು ಎಂದು ಹೇಳಿದ್ದೆ. ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಪ್ರಯತ್ನ ನಡೆಸಬೇಕಾಗಿದೆ. ಅದು ಅನುಷ್ಠಾನಗೊಂಡರೆ, ಜನತೆ ಚಿನ್ನ ಖರೀದಿಗೆ ದುಬೈಗೆ ಹೋಗಬೇಕಾಗಿಲ್ಲ ಎಂದರು. ಎಲ್ಲ ಪೊಲೀಸ್‌ಗೆ ವಸತಿ ಗುರಿ: ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಗಳಿದ್ದು, ಶೇ. 45 ರಷ್ಟುಪೊಲೀಸರಿಗೆ ವಸತಿಗೃಹ ನೀಡುವ ಕಾರ್ಯ ಆಗಿದೆ. ಎಲ್ಲರಿಗೂ ವಸತಿಗೃಹ ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ಡಾ. ಪರಮೇಶ್ವರ್‌ ಹೇಳಿದರು.

ಉನ್ನತ ಶಿಕ್ಷಣ ಒದಗಿಸಲು ಕರೆ: ಇಡೀ ದೇಶದಲ್ಲಿಯೇ ಕರ್ನಾಟಕ ಪೊಲೀಸರು ಬೆಸ್ಟ್‌. ಆಧುನಿಕ ತಂತ್ರಜ್ಞಾನ ಇಲಾಖೆಯನ್ನು ಮತ್ತಷ್ಟುಸದೃಢಗೊಳಿಸಿದೆ. ಇಲಾಖೆಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಆಧುನಿಕ ಜಗತ್ತಿಗೆ ತಕ್ಕಂತೆ ಇಲಾಖೆ ಬೆಳೆದಿದೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಚಾಲಿತ ಕ್ಯಾಮರಾಗಳ ಮೂಲಕ ತನಿಖೆ ನಡೆಸಲಾಗುತ್ತಿದೆ. ಇದರಿಂದ ಪೊಲೀಸರು ಸ್ಮಾರ್ಟ್‌ ಆಗಿಸಿದೆ ಎಂದರು. ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಮಾತನಾಡಿ, ಡ್ರಗ್ಸ್‌ ಮತ್ತು ಟ್ರಾಫಿಕ್‌ ನಿಯಂತ್ರಣ ಮಂಗಳೂರಲ್ಲಿ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಪೊಲೀಸರ ವಸತಿಗೃಹ ಶಾಸಕರ ಭವನಕ್ಕೆ ಸರಿಸಟಿಯಾಗಿದೆ ಎಂದು ಶ್ಲಾಘಿಸಿದರು.

ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಮಾತನಾಡಿ, ಪುತ್ತೂರಿಗೆ ಎಸ್ಪಿ ಕಚೇರಿ ಸ್ಥಳಾಂತರಗೊಳಿಸಿ ಇಲ್ಲವೇ ಡಿಎಆರ್‌ ಘಟಕವನ್ನಾದರೂ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದ.ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ, ಪಶ್ಚಿಮ ವಲಯ ಐಜಿಪಿ ಅಮಿತ್‌ ಸಿಂಗ್‌, ಎಸ್ಪಿ ಯತೀಶ್‌ ಎನ್‌., ಡಿಸಿಪಿಗಳಾದ ಸಿದ್ಧಾರ್ಥ್‌ ಗೋಯಲ್‌, ರವಿಶಂಕರ್‌, ಕೋಸ್ಟ್‌ಗಾರ್ಡ್‌ ಕಮಾಂಡರ್‌ ಎಂ.ಎ. ಅಗರವಾಲ್‌ ಇದ್ದರು.

ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಂದ್ರ ವಂದಿಸಿದರು. ವಿವೇಕ್‌ ಕಾರ್ಯಕ್ರಮ ನಿರೂಪಿಸಿದರು.ಪುತ್ತೂರು ಮಹಿಳಾ ಠಾಣೆಗೆ 1 ಕೋಟಿ ರು.

ಮಹಿಳಾ ಪೊಲೀಸ್‌ ಠಾಣೆಗೆ ಜಾಗವಿದ್ದು, ಠಾಣೆ ನಿರ್ಮಾಣಕ್ಕೆ ಅನುದಾನ ಒದಗಿಸಬೇಕೆಂಬ ಶಾಸಕ ಅಶೋಕ್‌ ರೈಯವರ ಬೇಡಿಕೆಗೆ ಸ್ಪಂದಿಸಿದ ಗೃಹ ಸಚಿವ ಡಾ. ಪರಮೇಶ್ವರ್‌, ‘ಬಿ’ ಕೆಟಗರಿಯಡಿ ಮಹಿಳಾ ಠಾಣೆ ನಿರ್ಮಾಣಕ್ಕೆ ಒಂದು ಕೋಟಿ ರು. ಮಂಜೂರುಗೊಳಿಸುವುದಾಗಿ ಹೇಳಿದರು.

ಪೊಲೀಸ್‌ ಠಾಣೆಗೆ ತೆರಳಿದರೆ ಚಾ, ಕಾಫಿ ಉಪಚಾರ! ಜನರು ಪೊಲೀಸ್‌ ಠಾಣೆಗೆ ಬರುವವರನ್ನೆಲ್ಲಾ ಕಳ್ಳರು ಎಂದು ತಿಳಿಯುವ ಮನಸ್ಥಿತಿ ಬದಲಾಗಬೇಕು. ಜನಸ್ನೇಹಿ ಪೊಲೀಸ್‌ ಠಾಣೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಬರುವವರಿಗೆ ಚಹಾ, ಕಾಫಿ ಸೇರಿದಂತೆ ಆದರದ ವ್ಯವಸ್ಥೆಗೆ ತಲಾ 1 ಲಕ್ಷ ರು. ಮೊತ್ತ ನೀಡಲಾಗುತ್ತಿತ್ತು. ಅದನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ. ಅದನ್ನು ಮತ್ತೆ ಮುಂದುವರಿಸಲಾಗುವುದು ಎಂದು ಗೃಹ ಸಚಿವ ಡಾ. ಪರಮೇಶ್ವರ್‌ ಹೇಳಿದರು.

PREV

Recommended Stories

ದಸರಾಕ್ಕೆ ದೀಪ್ತಾ ಭಾಸ್ತಿಗೆ ಆಹ್ವಾನವಿಲ್ಲಕೆ? : ಬಿವೈವಿ
ಕನಕಪುರದಲ್ಲಿ ವೈದ್ಯ ಕಾಲೇಜಿಗೆ ಭೂಮಿ ಖರೀದಿಗೆ ಹಣ ಮಂಜೂರು