ಜಡ್ಡುಗಟ್ಟಿರುವ ಗ್ರಾಪಂ ಆಡಳಿತ ವ್ಯವಸ್ಥೆಗೆ ಚುರುಕು ನೀಡಲು ಆಗ್ರಹಿಸಿ ತಾಪಂ ಕಚೇರಿಗೆ ಮುತ್ತಿಗೆ

KannadaprabhaNewsNetwork |  
Published : Dec 01, 2024, 01:31 AM IST
55 | Kannada Prabha

ಸಾರಾಂಶ

ನಂಜನಗೂಡು ತಾಲೂಕಿನ ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಚರಂಡಿಗಳು ಹೂಳಿನಿಂದಾವೃತಗೊಂಡಿದ್ದು, ಸ್ವಚ್ಚತೆ ಕಾಪಾಡುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಹಾಗೂ ಬೀದಿ ದೀಪಗಳ ಸಮಸ್ಯೆ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಇನ್ನೂ ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಇ ಸ್ವತ್ತು ನೀಡಲು ಜನರನ್ನು ಅಲೆದಾಡಿಸುತ್ತಿದ್ದಾರೆ. ಸರಿಯಾದ ದಾಖಲೆಗಳಿದ್ದರೂ ನಮೂನೆ 9 ಮತ್ತು 11ಎ ನೀಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ನಂಜನಗೂಡು

ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಗ್ರಾಮ ಪಂಚಾಯ್ತಿಗಳು ವಿಫಲವಾಗಿವೆ. ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಚುರುಕು ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಶನಿವಾರ ತಾಲೂಕು ಪಂಚಾಯತ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕಚೇರಿ ಪ್ರವೇಶದ್ವಾರದ ಬಾಗಿಲು ಬಂದ್ ಮಾಡಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ತಾಲೂಕಿನ ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಚರಂಡಿಗಳು ಹೂಳಿನಿಂದಾವೃತಗೊಂಡಿದ್ದು, ಸ್ವಚ್ಚತೆ ಕಾಪಾಡುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಹಾಗೂ ಬೀದಿ ದೀಪಗಳ ಸಮಸ್ಯೆ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.

ಇನ್ನೂ ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಇ ಸ್ವತ್ತು ನೀಡಲು ಜನರನ್ನು ಅಲೆದಾಡಿಸುತ್ತಿದ್ದಾರೆ. ಸರಿಯಾದ ದಾಖಲೆಗಳಿದ್ದರೂ ನಮೂನೆ 9 ಮತ್ತು 11ಎ ನೀಡುತ್ತಿಲ್ಲ. ತಾಲೂಕಿನ ಎಲ್ಲಾ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ನಗರ ಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದು, ಕೇಂದ್ರ ಸ್ಥಳದಲ್ಲಿ ಯಾರೊಬ್ಬರೂ ವಾಸವಿರುವುದಿಲ್ಲ. ಇದರಿಂದಾಗಿ ನಾಗರೀಕರ ಕುಂದು ಕೊರತೆಗಳು ನಿವಾರಣೆಯಾಗುತ್ತಿಲ್ಲ. ಹೀಗಾಗಿ, ಕೇಂದ್ರ ಸ್ಥಳದಲ್ಲಿ ವಾಸವಿಲ್ಲದ ಸಿಬ್ಬಂದಿ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಜೆರಾಲ್ಡ್‌ ರಾಜೇಶ್‌ ಮನವಿ ಸ್ವೀಕರಿಸಿ ಮಾತನಾಡಿ, ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ಅನವಶ್ಯಕ ವಿಳಂಬ ಅಥವಾ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ದೂರು ನೀಡಿದಲ್ಲಿ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು. ಇ ಸ್ವತ್ತು ನೀಡಿಕೆಯಲ್ಲಿ ವಿಳಂಬವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು.

ಸಂಘದ ಜಿಲ್ಲಾಧ್ಯಕ್ಷ ಹಾಡ್ಯ ರವಿ, ಕೆರೆಹುಂಡಿ ರಾಜಣ್ಣ, ಚಿಕ್ಕಸ್ವಾಮಿ, ಹನುಮಯ್ಯ, ಕಸುವಿನಹಳ್ಳಿ ಮಂಜೇಶ್‌, ಹಂಡುವಿನಹಳ್ಳಿ ರವಿ, ದೇವೀರಮ್ಮನಹಳ್ಳಿ ಹುಂಡಿ ಮಹೇಶ್‌, ಸಿದ್ದರಾಜು, ವಳಗೆರೆ ಗಣೇಶ, ಅಂಬಳೆ ಮಹದೇವಸ್ವಾಮಿ, ಹದಿನಾರು ಭುಜಂಗಪ್ಪ, ಮುದ್ದಹಳ್ಳಿ ಕುಮಾರ್‌, ಮರಿಸ್ವಾಮಿ, ದೇವಣ್ಣ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌