ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಕ್ತಹೀನತೆ, ಪೋಲಿಯೊ ರೋಗಗಳು ಇಂದು ನಿನ್ನೆಯದಲ್ಲ. ಆಗಿನ ಹಳೇ ಕಾಲದಲ್ಲಿ ಈ ಕಾಯಿಲೆಗಳಿಗೆ ಔಷಧಿಯೇ ಇರಲಿಲ್ಲ. ಹೊಸ ಹೊಸ ಸಂಶೋಧನೆಗಳಿಂದ ಈ ರೋಗಗಳಿಗೆ ಈಗ ಔಷಧಿ ಕಂಡುಹಿಡಿಯಲಾಗಿದೆ. ಜಂತುಹುಳು ದೇಹದಲ್ಲಿ ಸೇರಿ ರಕ್ತಹೀನತೆಯಿಂದ ಬಳಲುವುದಲ್ಲದೆ ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗಲಿದೆ. ಮಕ್ಕಳಲ್ಲಿ ರಕ್ತಹೀನತೆ ತಡೆಯಲು ಜಂತುಹುಳು ನಿವಾರಣಾ ಮಾತ್ರೆ ನೆರವಾಗಲಿದೆ. ಮಕ್ಕಳು, ವಯಸ್ಕರು ಸೇರಿದಂತೆ ಎಲ್ಲರೂ ಮಾತ್ರೆ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ಮಾಡಿದರು.ಆಗಸ್ಟ್ 10ರಿಂದ 17ರವರೆಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡ ಝೋಲ್- 400 ಎಂಜಿ ಮಾತ್ರೆಗಳನ್ನು ಉಚಿತವಾಗಿ ನೀಡಿ ಮಕ್ಕಳನ್ನು ಜಂತುಹುಳು ಮುಕ್ತರನ್ನಾಗಿಸಲಾಗುತ್ತಿದೆ. ಸರ್ಕಾರವು ಜಂತುಹುಳು ರೋಗ ನಿವಾರಣೆಗೆ ಆರೋಗ್ಯ ಇಲಾಖೆ ಮೂಲಕ ಕಾರ್ಯಕ್ರಮ ಆಯೋಜಿಸುತ್ತಿದೆ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಹಾರೈಸಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ, ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿರುವುದು ಎಲ್ಲರಿಗೂ ಅಗತ್ಯವಾಗಿದ್ದು, ಅದಕ್ಕಾಗಿ ಪ್ರತಿಯೊಬ್ಬರೂ ಅದರಲ್ಲೂ ಮಕ್ಕಳು ಜಂತುಹುಳು ನಿವಾರಣಾ ಮಾತ್ರೆ ತೆಗೆದುಕೊಳ್ಳಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಬಗ್ಗೆ ತಮ್ಮ ಸುತ್ತಮುತ್ತಲಿನ ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಅನಿಮೀಯ ಮುಕ್ತ ಜಿಲ್ಲೆಗಾಗಿ ಇಂದಿನಿಂದ 17ರವರೆಗೆ ಅಭಿಯಾನ ಆರಂಭಿಸಲಾಗಿದ್ದು, ಆ. 17ರ ಮಾಪ್- ಅಪ್ ದಿನದಂದು ಬಿಟ್ಟುಹೋದ ಮಕ್ಕಳಿಗೆ ಮಾತ್ರೆಗಳನ್ನು ನೀಡಲಾಗುವುದು. ಈ ಬಾರಿ ಚಾಮರಾಜನಗರ ತಾಲೂಕಿನಲ್ಲಿ 68,556 ಮಕ್ಕಳಿಗೆ, ಗುಂಡ್ಲುಪೇಟೆ ತಾಲೂಕಿನಲ್ಲಿ 40,485, ಕೊಳ್ಳೇಗಾಲ ತಾಲೂಕಿನಲ್ಲಿ 31,849, ಹನೂರು ತಾಲೂಕಿನಲ್ಲಿ 34,428 ಹಾಗೂ ಯಳಂದೂರು ತಾಲೂಕಿನಲ್ಲಿ 14,819 ಮಕ್ಕಳು ಸೇರಿದಂತೆ ಜಿಲ್ಲಾದ್ಯಂತ ಒಟ್ಟು 1,90,137 ಮಕ್ಕಳಿಗೆ ಜಂತು ನಿವಾರಣಾ ಮಾತ್ರೆಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಡಾ. ರಾಜೇಶ್‌ಕುಮಾರ್ ತಿಳಿಸಿದರು.