ಸಾಮಾನ್ಯ ಸಭೆ । ಆರೋಗ್ಯ ಅಧಿಕಾರಿಗಳಿಗೆ ಸೂಚನೆ
ಕನ್ನಡಪ್ರಭ ವಾರ್ತೆ ಹಾಸನಈಗಾಗಲೇ ಮಳೆಗಾಲ ಆರಂಭವಾಗಿದ್ದು ಯಾವುದೇ ರೀತಿಯ ಕಾಯಿಲೆಗಳು ಹರಡದಂತೆ ಹೆಚ್ಚಿನ ಗಮನವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ ಹೇಳಿದರು.
ಹಾಸನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಾಲೆಗಳು, ಆಸ್ಪತ್ರೆ, ದೇವಸ್ಥಾನಗಳು ಹಾಗೂ ಇನ್ನಿತರ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.ವಿವಿಧ ಕಾಯಿಲೆಗಳ ಬಗ್ಗೆ ಸಾರ್ವಜನಿಕರಿಗೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ವಿಡಿಯೋ, ಛಾಯಾಚಿತ್ರಗಳನ್ನು ಡಿಜಿಟಲ್ ಬೋರ್ಡ್‌ಗಳಲ್ಲಿ ಪ್ರದರ್ಶಸಿಸುವಂತೆ ತಿಳಿಸಿದರು.
ಹೋಟೆಲ್‌ಗಳಿಗೆ ಉಪಾಹಾರ ಸೇವನೆಗೆ ಬರುವ ಎಲ್ಲಾ ಸಾರ್ವಜನಿಕರಿಗೆ ಬಿಸಿ ನೀರನ್ನೇ ಕಡ್ಡಾಯವಾಗಿ ನೀಡುವಂತೆ ನಿರ್ದೇಶನ ನೀಡಿ ಎಂದು ಅವರು ಹೇಳಿದರು. ಅಂಗನವಾಡಿಯಲ್ಲಿರುವ ಮಕ್ಕಳಿಗೆ ಪ್ರತಿನಿತ್ಯ ಪೌಷ್ಟಿಕಾಂಶ ಆಹಾರ ನೀಡಬೇಕು ಎಂದರಲ್ಲದೆ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಅಂಗನವಾಡಿ ಮೇಲ್ವಿಚಾರಕರು ಅಂಗನವಾಡಿಗಳಿಗೆ ಪ್ರತಿನಿತ್ಯ ಭೇಟಿ ನೀಡಿ ಆಹಾರ ಗುಣಮಟ್ಟ ಪರೀಕ್ಷೆ ಮಾಡಬೇಕು. ಅಂಗನವಾಡಿಯಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳಿ. ಪ್ರತಿ ಅಂಗನವಾಡಿಯಲ್ಲಿ ಕಡ್ಡಾಯವಾಗಿ ಶೌಚಾಲಯ ಇರಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕು. ಎಲ್ಲ ಇಲಾಖೆಗಳು ತಮ್ಮ ಇಲಾಖೆಯ ಪ್ರಗತಿಯ ಬಗ್ಗೆ ಹಾಗೂ ಇಲಾಖೆಯಿಂದ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಿರುವವರ ಬಗ್ಗೆ ಯಶೋಗಾಥೆಗಳನ್ನೂ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ ಹಾಸನ ತಾಲೂಕು ಪಂಚಾಯಿತಿ ವತಿಯಿಂದ ವಿಶೇಷಚೇತನರಿಗೆ ವಾಕರ್, ವಾಕರ್ ಸ್ಟಿಕ್ ಇನ್ನಿತರ ಉಪಕರಣಗಳನ್ನು ವಿತರಿಸಿದರು.ಹಾಸನ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಎಚ್.ಡಿ. ಮಾತನಾಡಿ, ಇಲಾಖೆಗಳ ಮಾಹಿತಿಯನ್ನು ಪಡೆದುಕೊಂಡು ಇಲಾಖೆಗಳಿಗೆ ನೀಡಿರುವ ಗುರಿಯನ್ನು ನಿಗದಿತ ಅವಧಿಯಲ್ಲಿ ಸಾಧಿಸುವಂತೆ ತಿಳಿಸಿದರು.
ಹಾಸನ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿ, ಹಾಸನ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ್, ಹಾಸನ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ವಿನಾಯಕ ಅಗಸಿ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.