ಕನ್ನಡವನ್ನು ಆಕಾಶದೆತ್ತರಕ್ಕೆ ಬೆಳೆಸಲು ಆಸಕ್ತಿವಹಿಸಿ

KannadaprabhaNewsNetwork |  
Published : May 07, 2024, 01:05 AM IST
ಉದ್ಘಾಟನೆ | Kannada Prabha

ಸಾರಾಂಶ

ಸಾಹಿತಿಗಳು, ಬರಹಗಾರರು ಒಂದು ಸರ್ಕಾರ ಅಥವಾ ಓರ್ವ ಜನಪ್ರತಿನಿಧಿಯ ವಿರುದ್ದ ಜನಾಭಿಪ್ರಾಯ ಮೂಡಿಸಬಲ್ಲರು ಎಂಬುದಕ್ಕೆ ಕಳೆದ ವಿಧಾನಸಭಾ ಚುನಾವಣೆಯೇ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರುಸಾಹಿತಿಗಳು, ಬರಹಗಾರರು ಒಂದು ಸರ್ಕಾರ ಅಥವಾ ಓರ್ವ ಜನಪ್ರತಿನಿಧಿಯ ವಿರುದ್ದ ಜನಾಭಿಪ್ರಾಯ ಮೂಡಿಸಬಲ್ಲರು ಎಂಬುದಕ್ಕೆ ಕಳೆದ ವಿಧಾನಸಭಾ ಚುನಾವಣೆಯೇ ಸಾಕ್ಷಿಯಾಗಿದೆ. ಕನ್ನಡಿಗರು, ಕನ್ನಡ ಶಾಲೆಗಳ ಮಕ್ಕಳನ್ನು ನಿರ್ಲಕ್ಷಿಸಿದ್ದ, ಹಲವರನ್ನು ಸೋಲಿಸಿ ಮನೆಗೆ ಕಳುಹಿಸುವಲ್ಲಿ ಸಾಹಿತಿಗಳು, ಬರಹಗಾರರ ಪಾತ್ರ ದೊಡ್ಡದಿದೆ ಎಂದು ಸಂಸ್ಕೃತಿ ಚಿಂತಕರು ಹಾಗೂ ರಂಗಸಮಾಜದ ಸದಸ್ಯ ಡಾ.ರಾಜಪ್ಪ ದಳವಾಯಿ ಹೇಳಿದರು.ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸರ್ಕಾರದ ವಿವಿಧ ಆಕಾಡೆಮಿ ಮತ್ತು ಪ್ರಾಧಿಕಾರಿಗಳಿಗೆ ನೇಮಕಗೊಂಡಿರುವ ಜಿಲ್ಲೆಯ ಸಾಹಿತಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡಿಗರಾಗಿ, ಕನ್ನಡಕ್ಕೆ ಕೆಲಸ ಮಾಡಿದವರನ್ನು ಸರ್ಕಾರ ಗುರುತಿಸಿ ನಾಮ ನಿರ್ದೇಶನ ಮಾಡಿದೆ. ಇವರನ್ನು ಅಭಿನಂದಿಸುವ ಮೂಲಕ ಸಾಹಿತ್ಯ ಪರಿಷತ್ ಕನ್ನಡವನ್ನು ಬೆಳೆಸುವ ಕೆಲಸ ಮಾಡುತ್ತಿದೆ ಎಂದರು.ಸರ್ಕಾರದ ಅಕಾಡೆಮಿಗಳ ನೇಮಕದಲ್ಲಿ ತುಮಕೂರು ಜಿಲ್ಲೆಗೆ ಸಿಂಹಪಾಲು ಲಭಿಸಿದೆ. ವಿವಿಧ ಜ್ಞಾನ ಶಾಖೆಗಳಲ್ಲಿ ಕೆಲಸ ಮಾಡಿದವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯ್ಕೆ ಮಾಡಿರುವುದು ಸಂತೋಷ ವಿಚಾರವಾಗಿದೆ. ಇದರಲ್ಲಿ ನನ್ನ ಶಿಷ್ಯರೂ ಇರುವುದು ನನಗೆ ಮತ್ತಷ್ಟು ಹೆಮ್ಮೆಯನ್ನು ತಂದುಕೊಡುತ್ತದೆ. ನಿಮ್ಮಿಂದ ಮತ್ತಷ್ಟು ಕನ್ನಡ ಕಟ್ಟುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಾಹಿತಿ ಡಾ.ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿಯ ಕೆಲಸವೂ ವ್ಯಕ್ತಿಗೆ ಗೌರವ ತಂದುಕೊಡಬಲ್ಲವು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ವೈಷಮ್ಯದ ವಿರುದ್ದ ಬರೆಯುತ್ತಿರುವ ಅನೇಕರು ಈ ಬಾರಿಯ ಅಕಾಡೆಮಿಗಳಿಗೆ ನೇಮಕಗೊಂಡಿರುವುದನ್ನು ಕಾಣಬಹು ದಾಗಿದೆ. ಸಾಹಿತ್ಯದ ಮೂಲಕ ಜನರ ನಡುವೆ ಬಾಂಧವ್ಯ ಬೆಸೆಯುವ ಕೆಲಸ ಮಾಡಿದವರನ್ನು ಸರ್ಕಾರ ಗುರುತಿಸಿರುವುದು ನಮ್ಮ ದಾರಿ ಸರಿಯಿದೆ ಎಂಬುದನ್ನು ಸಾಬೀತುಪಡಿಸಿದಂತಾಗಿದೆ ಎಂದರು.

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ್ ಮಾತನಾಡಿ, ತುಮಕೂರು ಜಿಲ್ಲೆಯ ಮೂಲದ 13 ಜನ ಪ್ರತಿಭಾವಂತರನ್ನು ಸರ್ಕಾರ ಗುರುತಿಸಿ, ನಾಮನಿರ್ದೇಶನ ಮಾಡಿರುವುದು ಈ ಜಿಲ್ಲೆಗೆ ಸಂದ ಗೌರವ ಮತ್ತು ಹೆಮ್ಮೆ ಪಡುವ ವಿಚಾರವಾಗಿದೆ. ಜಿಲ್ಲಾ ಕಸಾಪ ಇಡೀ ರಾಜ್ಯದಲ್ಲಿಯೇ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ನಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಿದೆ ಎಂದು ಹೇಳಿದರು.ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಜನಸಾಮಾನ್ಯರ ಪರಿಷತ್ತಾಗಿ ಬೆಳೆಯಬೇಕು. ಸರ್ಕಾರದ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ನೇಮಕವಾದ 13 ಜನ ಜಿಲ್ಲೆಯ ಸಾಹಿತಿಗಳು, ಕಲಾವಿದರುಗಳನ್ನು ಅಭಿನಂದಿಸಲಾಗುತ್ತಿದೆ. ನೇಮಕಗೊಂಡಿರುವ ಸಾಹಿತಿಗಳು, ಕಲಾವಿದರು ತಮ್ಮ ಅಕಾಡೆಮಿ ಅಥವಾ ಪ್ರಾದಿಕಾರದ ಒಂದೊಂದು ಕಾರ್ಯಕ್ರಮವನ್ನು ತುಮಕೂರು ಜಿಲ್ಲೆಯ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಾಡಲು ಅವಕಾಶ ಮಾಡಿಕೊಟ್ಟರೆ, ಅದು ಜಿಲ್ಲೆಯ ಮಟ್ಟಿಗೆ ದೊಡ್ಡ ಉಪಯೋಗವಾಗಲಿದೆ. ಕನ್ನಡದ ತೇರು ಎಳೆಯುವ ಕಾಯಕದಲ್ಲಿ ನಾವು, ನೀವು ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.ಸನ್ಮಾನ:

ಕಸಾಪ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ್, ಕನ್ನಡ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ.ಕರಿಗೌಡ ಬೀಚನಹಳ್ಳಿ, ಕನ್ನಡ ಗಡಿ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಚಾಣಗೆರೆ ವೆಂಕಟರಾಮಯ್ಯ, ಕುವೆಂಪು ಭಾಷಾ ಭಾರತಿಯ ಸದಸ್ಯ ಡಾ.ಎಸ್. ಗಂಗಾಧರಯ್ಯ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀ.ಹ., ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಶ್ರೀಮತಿ ಅನಿತಾ ನಟರಾಜ್ ಹುಳಿಯಾರ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಶ್ರೀಮತಿ ಸುಮಾ ಸತೀಶ್, ಕುವೆಂಪು ಭಾಷಾ ಭಾರತಿ ಸದಸ್ಯ ಡಾ.ಚಿತ್ತಯ್ಯಪೂಜಾರ್, ಕರ್ನಾಟಕ ಲಲಿತಕಲಾ ಆಕಾಡೆಮಿ ಸದಸ್ಯ ಮನುಚರ್ಕವತಿ, ಪುಸ್ತಕ ಆಯ್ಕೆ ಸಮಿತಿ ಸದಸ್ಯ ಹಂ.ಗು, ರಾಜೇಶ್, ಕುವೆಂಪು ಭಾಷಾ ಭಾರತಿ ಸದಸ್ಯ ನಾರಾಯಣ ಹೊಡಘಟ್ಟ ಅವರನ್ನ ಜಿಲ್ಲಾ ಕಸಾಪ ವತಿಯಿಂದ ಅಭಿನಂದಿಸಲಾಯಿತು. ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಡಿ.ಎನ್.ಯೋಗೀಶ್ವರಪ್ಪ, ಕಂಟಲಗೆರೆ ಸಣ್ಣಹೊನ್ನಯ್ಯ, ಕೋಶಾಧ್ಯಕ್ಷ ಎಂ.ಎಚ್.ನಾಗರಾಜು, ಸಂಘಟನಾ ಕಾರ್ಯದರ್ಶಿ ಜಿ.ಎಚ್.ಮಹದೇವಪ್ಪ, ಎಸ್.ಯೋಗಾನಂದ ಹಾಗೂ ಸಂಚಾಲಕ ಕೆ.ಎಸ್.ತೇಜಶ್ವನಿ ಮತ್ತು ಡಾ.ಅಜಯ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ