ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ-ಸಚಿವ ಲಮಾಣಿ

KannadaprabhaNewsNetwork |  
Published : Aug 24, 2026, 02:30 AM IST
ಹಾವೇರಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿದರು. | Kannada Prabha

ಸಾರಾಂಶ

ಜನಸೇವೆಗೆ ಇರುವ ಅವಕಾಶ ಪಡೆಯಲು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜನರ ಮಧ್ಯೆ ಇದ್ದು ಅವರ ಸಮಸ್ಯೆಗಳಿಗೆ ಪರಿಹಾರ ಕಾಣಲು ಮುಂದಾಗಬೇಕು. ನಾನೂ ಕೂಡ ತಮ್ಮೊಂದಿಗೆ ಸದಾ ಕೈಜೋಡಿಸುವೆ ಎಂದು ಸಕ್ಕರೆ ಮತ್ತು ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಹಾವೇರಿ: ಜನಸೇವೆಗೆ ಇರುವ ಅವಕಾಶ ಪಡೆಯಲು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜನರ ಮಧ್ಯೆ ಇದ್ದು ಅವರ ಸಮಸ್ಯೆಗಳಿಗೆ ಪರಿಹಾರ ಕಾಣಲು ಮುಂದಾಗಬೇಕು. ನಾನೂ ಕೂಡ ತಮ್ಮೊಂದಿಗೆ ಸದಾ ಕೈಜೋಡಿಸುವೆ ಎಂದು ಸಕ್ಕರೆ ಮತ್ತು ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಹಾವೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭಾರತ್ ಜೋಡೋ ಯುವ ಸಂಘಟನೆ, ಮತದಾರರ ಪಟ್ಟಿ ಪರಿಷ್ಕರಣೆ, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಗ್ಯಾರಂಟಿ ಸಮಿತಿ ರಚಿಸುವ ಕುರಿತು ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.

ಡಿಸೆಂಬರ್ ಮಾಸಾಂತ್ಯದೊಳಗೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತವೆ. ಗ್ರಾಪಂ ಮಟ್ಟದಲ್ಲಿ ಎಲ್ಲ ಮತದಾರರ ನೋಂದಣಿ ಮಾಡಿಸಬೇಕಿದೆ. ಯಾರೊಬ್ಬರೂ ಮತಪಟ್ಟಿಯಿಂದ ಹೊರಗುಳಿಯಬಾರದು. ಜೊತೆಗೆ ಭಾರತ್ ಜೋಡೋ ಯುವ ಸಂಘಟನೆಯನ್ನು ಬಲಪಡಿಸಲು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಿದೆ. ಇದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಆಶಯವಾಗಿದೆ ಎಂದರು.

ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿ, ಅಕ್ಟೋಬರ್ ತಿಂಗಳಲ್ಲಿ ನಡೆಯುವ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಐದು ಲಕ್ಷಕ್ಕಿಂತಲೂ ಹೆಚ್ಚು ಪದವೀಧರರು ಇದ್ದಾರೆ. ಆದರೆ ನೋಂದಾಯಿತ ಪದವೀಧರರು ಒಂದು ಲಕ್ಷ ಇದ್ದಾರೆ. 24 ವಿಧಾನಸಭಾ ಕ್ಷೇತ್ರದಲ್ಲಿ ಪದವೀಧರ ಮತದಾರರನ್ನು ಸಂಪರ್ಕಿಸಿರುವೆ. ಇನ್ನೂ ಅರ್ಹರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ. ಪಕ್ಷದ ಮುಖಂಡರು ಈ ನಿಟ್ಟಿನಲ್ಲಿ ಯತ್ನಿಸಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಯುವಕರನ್ನು ಸಂಘಟಿಸಲು ಭಾರತ ಜೋಡೋ ಯುವ ಸಂಘಟನೆ ನೋಂದಣಿಗೆ ಆ.31 ಕೊನೆಯ ದಿನ. 18ರಿಂದ 35 ವಯಸ್ಸಿನ ಎಸ್‌ಸಿ ಅಥವಾ ಎಸ್‌ಟಿ, ಮಹಿಳೆಯರು, ಒಬಿಸಿ, ಅಲ್ಪಸಂಖ್ಯಾತ ಹಾಗೂ ಸಾಮಾನ್ಯ ವರ್ಗದ ಪ್ರತಿನಿಧಿಗಳು ಸೇರಿ ಆಯಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ನೋಂದಣಿ ಮಾಡಿಸಬಹುದು. ಅಷ್ಟೇ ಅಲ್ಲದೇ ಮತದಾರರ ಪಟ್ಟಿ ಪರಿಷ್ಕರಣೆಯಿಂದ ತಾಂತ್ರಿಕವಾಗಿ ಹೊರಗುಳಿದ ಮತದಾರರನ್ನು ಗುರುತಿಸಿ ಅವರನ್ನು ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.

ಮುಖಂಡರಾದ ಎಸ್.ಎಫ್.ಎನ್ ಗಾಜಿಗೌಡ್ರ, ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಹಿರೇಮಠ, ಮಾದೇಗೌಡ ಗಾಜಿಗೌಡ್ರ, ಸಿ.ಬಿ. ಕುರವತ್ತಿಗೌಡ್ರ, ಎಸ್.ವಿ. ಪಾಟೀಲ, ಗುಡ್ಡನಗೌಡ ಅಂದಾನಿಗೌಡ್ರ, ಆನಂದಪ್ಪ ಅಕ್ಕೂರ, ಡಾ.ಸಂಜಯ ಡಾಂಗೆ, ಬಸವರಾಜ ಹೆಡಿಗ್ಗೊಂಡ, ಎಂ.ಎಂ. ಖಾಜಿ, ಲಲಿತಕ್ಕ ಹುಗ್ಗಿ, ಪ್ರಭುಗೌಡ ಬಿಷ್ಟನಗೌಡ್ರ, ಅತಾವುಲ್ಲಾಖಾನ್ ಉಪಸ್ಥಿತರಿದ್ದರು. ಪ್ರಸನ್ನ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.

ಭಾರತ್ ಜೋಡೋ ಯುವ ಸಂಘಟನೆ ಯೋಜನೆಯಡಿ ಪ್ರತಿ ಸಂಘಕ್ಕೆ ಪ್ರತಿ ವರ್ಷ ಹತ್ತು ಲಕ್ಷ ರು.ಗಳವರೆಗೆ ಸಹಾಯಧನವಿದೆ. ಈ ಸಂಘದ ಮೂಲಕ ನಾವು ಯುವ ಮತದಾರರನ್ನು ತಲುಪಬಹುದು. ಮುಂಬರುವ ಯಾವುದೇ ಚುನಾವಣೆಗೆ ಅವರು ಪಕ್ಷವನ್ನು ಮತ್ತಷ್ಟು ಬಲಪಡಿಸಲು ಸಹಕರಿಸಬಹುದು. ಅದಕ್ಕಾಗಿ ಯುವಕರನ್ನು ಸಬಲೀಕರಣಗೊಳಿಸುವ, ಸಾಂಸ್ಕೃತಿಕ ಹಾಗೂ ಸಾಮರಸ್ಯ ಭಾವ ಮೂಡಿಸುವ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೋಗಸಾಧನೆಯ ಅಮೃತಪಾನದಿಂದ ಮುಪ್ಪು-ಸಾವು ಮೀರಬಹುದು: ರಾಘವೇಶ್ವರ ಶ್ರೀ
ಪೊಲೀಸರೊಂದಿಗೆ ಸಹಕರಿಸಿ ಶಾಂತಿಯುತವಾಗಿ ಆಚರಿಸಿ: ಎಸ್ಪಿ ಎಸ್. ಜಾಹ್ನವಿ