ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ರೇಷ್ಮೆ ಇಲಾಖೆ ಆಡಳಿತ ತರಬೇತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಹಾಗೂ ಜಿಪಂ ಸಿಇಒ ಕೆ.ಆರ್.ನಂದಿನಿ ಉಪಸ್ಥಿತಿಯಲ್ಲಿ ತಾಲೂಕಿನ ಬರ ನಿರ್ವಹಣೆ, ಕುಡಿಯುವ ನೀರಿನ ಪೂರೈಕೆ, ವಸತಿ ಮತ್ತು ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಜೊತೆಗೆ ವಿವಿಧ ಅಭಿವೃದ್ಧಿ ವಿಷಯಗಳ ಕುರಿತಂತೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಕುಡಿಯುವ ನೀರಿನ ನಿರ್ವಹಣೆಗೆ ಪ್ರಥಮ ಆದ್ಯತೆ ನೀಡಬೇಕು. ಗ್ರಾಮವಾರು ನೀರಿನ ಲಭ್ಯತೆ ಹಾಗೂ ಬೇಡಿಕೆ ಪರಿಶೀಲಿಸಿ ಮುಂಚಿತವಾಗಿಯೇ ಗುರುತಿಸಬೇಕು. ಕೊಳವೆಬಾವಿ, ಪಂಪ್‌ಸೆಟ್ ಹಾಗೂ ಪೈಪ್‌ಲೈನ್‌ಗಳ ದುರಸ್ತಿಯನ್ನು ವಿಳಂಬವಿಲ್ಲದೆ ಕೈಗೊಂಡು ಅಗತ್ಯವಿರುವ ಕಡೆ ಪರ್ಯಾಯ ನೀರಿನ ಮೂಲಗಳನ್ನು ಗುರುತಿ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದರು.ತಾಪಂ ಇಒಗಳು ಮುಂಜಾಗ್ರತಾ ವಹಿಸಿ ತೊಂದರೆ ಸರಿಪಡಿಸಲು ಗ್ರಾಪಂಗಳನ್ನು ಸಜ್ಜುಗೊಳಿಸಬೇಕು. ಒಂದು ವೇಳೆ ಅಧಿಕಾರಿಗಳು ಲೋಪ ಮಾಡಿದರೆ ದಂಡನೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ಬರ ಪರಿಸ್ಥಿತಿ, ಕೆರೆ-ಕಟ್ಟೆಗಳಲ್ಲಿನ ನೀರಿನ ಸಂಗ್ರಹ, ಅಂತರ್ಜಲ ಮಟ್ಟ, ಬೆಳೆಗಳ ಸ್ಥಿತಿಗತಿ ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಪರಿಶೀಲಿಸಿ ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ಕೃಷಿ, ಪಶುಸಂಗೋಪನೆ, ನರೇಗಾ ಕಾಮಗಾರಿಗಳು, ಜಲ ಸಂರಕ್ಷಣೆ, ವಿದ್ಯುತ್ ಹಾಗೂ ಸಾರ್ವಜನಿಕರ ಇತರೆ ಸಮಸ್ಯೆಗಳ ಕುರಿತು ಪರಿಶೀಲಿಸಲಾಯಿತು. ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಜನರ ಸಮಸ್ಯೆಗಳಿಗೆ ಸ್ಥಳೀಯ ಹಂತದಲ್ಲಿಯೇ ತ್ವರಿತವಾಗಿ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.