ರೈತರ ಹಿತಕ್ಕಾಗಿ ಮೈಸೂರು ಮಹರಾಜರು ಅಣೆಕಟ್ಟೆ ನಿರ್ಮಿಸಿದ್ದಾರೆ. ಆದರೆ, ಸರ್ಕಾರವೇ ಅಣೆಕಟ್ಟೆ ಕಟ್ಟಿದಂತೆ ವರ್ತಿಸುತ್ತಾ ಇಲ್ಲಿನ ರೈತರ ಸಮಸ್ಯೆಗಳನ್ನು ಕಾವೇರಿ ನಿರ್ವಹಣಾ ಮಂಡಳಿ ಪ್ರಾಧಿಕಾರ ಮತ್ತು ಸುಪ್ರೀಕೋರ್ಟ್ ಮುಂದೆ ಮನವರಿಕೆ ಮಾಡಿ ತಿಳಿಸಲು ವಿಫಲವಾಗಿ ಪದೇ ಪದೇ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆ.ಆರ್.ಸಾಗರ ಜಲಾಶಯದಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಕೆ.ಆರ್.ಸಾಗರದ ಕಾವೇರಿ ನೀರವಾರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಮಿತಿ ಅಧ್ಯಕ್ಷ ಬಿ.ಸಿ ಕೃಷ್ಣೇಗೌಡ, ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಸೇರಿದಂತೆ ಸದಸ್ಯರು ನಿಗಮದ ಎದುರು ಪ್ರತಿಭಟನಾ ಧರಣಿ ನಡೆಸಿ ನಂತರ, ತಮಿಳುನಾಡುಗೆ ನೀರು ಹರಿಸುತ್ತಿರುವ ಸವಡೆಗಳ ಕಚೇರಿ ಎಂದು ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ರೈತರ ಹಿತಕ್ಕಾಗಿ ಮೈಸೂರು ಮಹರಾಜರು ಅಣೆಕಟ್ಟೆ ನಿರ್ಮಿಸಿದ್ದಾರೆ. ಆದರೆ, ಸರ್ಕಾರವೇ ಅಣೆಕಟ್ಟೆ ಕಟ್ಟಿದಂತೆ ವರ್ತಿಸುತ್ತಾ ಇಲ್ಲಿನ ರೈತರ ಸಮಸ್ಯೆಗಳನ್ನು ಕಾವೇರಿ ನಿರ್ವಹಣಾ ಮಂಡಳಿ ಪ್ರಾಧಿಕಾರ ಮತ್ತು ಸುಪ್ರೀಕೋರ್ಟ್ ಮುಂದೆ ಮನವರಿಕೆ ಮಾಡಿ ತಿಳಿಸಲು ವಿಫಲವಾಗಿ ಪದೇ ಪದೇ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ನಿರ್ಲಕ್ಷ್ಯತನ ತೋರಿ ಕೇವಲ ರಾಜಕೀಯಕ್ಕೆ ಕಾವೇರಿ ವಿಷಯವನ್ನು ಬಳಸಿಕೊಳ್ಳುತ್ತಿದ್ದಾರೆ. ಜೊತೆಗೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಜಿಲ್ಲೆಯವರಾದರೂ ಸ್ಥಳಿಯ ರೈತರ ಬೆಳಗೆ ನೀರು ಹರಿಸಲು ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಜಲಸಂಪನ್ಮೂಲ ಇಲಾಖೆ ತಮಿಳುನಾಡಿನ ನೀರುಬಿಡುವ ಸವಡೆಯಂತದಾಗಿದೆ. ಇದು ರೈತರ ಬದುಕಿಗೆ ಬೆಂಕಿ ಇಡುವ ಸರ್ಕಾರವಾಗಿದೆ. ಪದೇ ಪದೇ ತಮಿಳುನಾಡಿಗೆ ಕೆ.ಆರ್.ಸಾಗರ ಅಣೆಕಟ್ಟೆಯಿಂದ ಹರಿಸುತ್ತಿರುವ ನೀರನ್ನ ನಿಲ್ಲಿಸಿ ರಾಜ್ಯದ ರೈತರನ್ನು ಕಾಪಾಡಬೇಕು. ರೈತರಿಗೆ ಅನ್ಯಾಯು ಮಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕೂಡಲೆ ರಾಜಿನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಮಂತ್ರಿ ಎನ್.ಚಲುವರಾಯಸ್ವಾಮಿ ಅಣೆಕಟ್ಟೆಯಲ್ಲಿ ನೀರಿಲ್ಲ. ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು. ರೈತರು ಬೆಳೆ ಬೆಳೆಯುಲು ಬಿತ್ತನೆ ಕಾರ್ಯ ಕೈಗೊಳ್ಳಬೇಡಿ ಎಂದು ಯಾವುದೇ ರೈತರ ಸಭೆ ಕರೆಯದೆ ಲಘುವಾಗಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.
ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ ಅವರು ಜಮೀನಿನಲ್ಲಿ ನಾಟಿ ಮಾಡುತ್ತಿರುವ ದೃಷ್ಯ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೆ ಗಂಭೀರತೆ ಇಲ್ಲವೆ. ನೀವು ಬಿತ್ತನೆ ಕಾರ್ಯ ಮಾಡಬೇಡಿ ಎಂದು ಹೇಳಿರುವುದು ಕೇವಲ ರೈತರಿಗೆ ಮಾತ್ರನಾ? ಇದು ಜನಪ್ರತಿನಿಧಿಗಳಿಗೆ ಅನ್ವಯವಾಗುವುದಿಲ್ಲವೆ ಎಂದು ಪ್ರಶ್ನಿಸಿದರು.
ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ ಮಾತನಾಡಿ, ಈ ಹಿಂದೆ 110 ಅಡಿ ಇದ್ದ ಸಮಯದಲ್ಲಿ ಭತ್ತ ಹಾಗೂ ಕಬ್ಬಿಗೆ ನೀರು ಹರಿಸಲಾಗಿತ್ತು. ಈಗಿನ ಸರ್ಕಾರ ತಮಿಳುನಾಡಿನ ಕೈಗೊಂಬೆಯಾಗಿ ರೈತರಿಗೆ ಬೆಳೆ ಬೆಳೆಯದಂತೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಕೆ.ಆರ್.ಎಸ್ ಮಹದೇವು, ದರ್ಶನ್, ಎಂ.ವಿ, ಕೃಷ್ಣ, ರಾಮಚಂದ್ರು, ಸುರೇಶ್, ವಸಂತಕುಮಾರ್, ಚಾಮರಾಜು, ರಾಮಕೃಷ್ಣ, ಕಿರಂಗೂರು ಮಹದೇವು, ಪುಟ್ಟಪ್ಪ, ವಿಷಕಂಠ ಸೇರಿದಂತೆ ಸುಮಾರು 50 ಕ್ಕೂ ಸದಸ್ಯರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.