ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ, ಸಾರ್ವಜನಿಕರಿಗೆ ಅಗತ್ಯ ಎಲ್ಲ ಸೌಲಭ್ಯಗಳನ್ನೂ ಒದಗಿಸಲು ನಾವೆಲ್ಲ ಸಿದ್ಧರಾಗಿರಬೇಕು. ಪ್ರತಿಯೊಂದು ಪ್ರಜಾಸೇವಾ ಆಂದೋಲನ ನಡೆಯುವ ಶನಿವಾರದಂದು ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳೂ ಹಾಜರಿರಬೇಕು ಎಂದು ಸೂಚಿಸಿದರು.
ಸಂಯೋಜಿತ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ ಅಡಿ ಸದ್ಯಕ್ಕೆ ಬರುತ್ತಿರುವ ದೂರುಗಳ ಸಂಖ್ಯೆ ಎಷ್ಟು ಎಂದು ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದಾಗ ಕನಿಷ್ಠ ಸಂಖ್ಯೆಯಲ್ಲಿ ದೂರುಗಳು ದಾಖಲಾಗುತ್ತಿವೆ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಕಡಿಮೆ ಸಂಖ್ಯೆಯಲ್ಲಿ ದೂರು ದಾಖಲಾಗಲು ಕಾರಣವೇನು. ಜೊತೆಗೆ, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪ್ರಜಾಸೇವಾ ಆಂದೋಲನ ಯೋಜನೆ ಕುರಿತು ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಬಹಳ ಹೊತ್ತು ಚರ್ಚೆ ನಡೆಸಿದ್ದೇನೆ. ಈ ಯೋಜನೆ ಕಾರ್ಯರೂಪಕ್ಕೆ ಬರುವುದು ತುಂಬಾ ಕಷ್ಟ. ಅರ್ಜಿಗಳನ್ನು ಕೊಡುತ್ತೇವೆ, ಅರ್ಜಿಗಳನ್ನು ಪಡೆದುಕೊಳ್ಳುತ್ತೇವೆ. ಸರ್ಕಾರ ರೂಪಿಸುವ ಯೋಜನೆಯನ್ನು ಜನರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ ಎಂದರು.
ಐಪಿಜಿಆರ್‌ಎಸ್‌ನಲ್ಲಿ ಬಂದ ದೂರುಗಳಿಗೆ ನೀವು ಬೇರೆ ಇಲಾಖೆಗಳ ಮೇಲೆ ಅವಲಂಬಿತರಾಗಬೇಕಾಗಿದೆ ಎಂದು ಹೇಳುತ್ತೀರಿ. ಆದರೆ, ಇಷ್ಟೆಲ್ಲ ಹಣ ಖರ್ಚು ಮಾಡಿ ಜಾರಿಗೆ ತರಲು ಯತ್ನಿಸುತ್ತಿರುವ ಯೋಜನೆ ವ್ಯರ್ಥವಾಗುತ್ತದೆ. ಆದ್ದರಿಂದ ಈ ಸಮಸ್ಯೆ ಪರಿಹರಿಸಲು ನಿಮ್ಮ ಸಲಹೆ ಕೊಡಿ ಎಂದು ಮನವಿ ಮಾಡಿದರು.
ಶನಿವಾರ ನಡೆಯುವ ಪ್ರಜಾಸೇವಾ ಆಂದೋಲನದಲ್ಲಿ ಯಾವೆಲ್ಲ ಇಲಾಖೆಗಳಿಗೆ ಸಂಬಂಧಿಸಿದ ಎಷ್ಟೆಲ್ಲ ಮನವಿಗಳು ಬಂದಿವೆ ಎಂಬ ಮಾಹಿತಿಯನ್ನು ನನಗೆ ಕೊಡಿ. ಈ ಬಾರಿ ಜನರ ಸಾಮಾನ್ಯ ಸಮಸ್ಯೆಗಳೇನು ಎಂಬುದರ ಕುರಿತು ನಿಗಾ ವಹಿಸಿ. ಪ್ರತಿಯೊಂದು ವಿಭಾಗಕ್ಕೂ ಸಂಬಂಧಿಸಿದಂತೆ ಬಂದ ಮನವಿಗಳ ಕುರಿತು ಮಾಹಿತಿ ಸಿಕ್ಕರೆ ಆಟೋಮೇಟ್ ಮಾಡಿ ಸೇವೆಯನ್ನು ಬೇಗ ಒದಗಿಸಲು ಸಾಧ್ಯವಾಗುತ್ತದೆ ಎಂದು ಸೂಚಿಸಿದರು.