ಸರ್ಕಾರಿ ಪಾಲಿಟೆಕ್ನಿಕ್‌ ಸುಧಾರಣೆಗೆ ಕ್ರಮಕೈಗೊಳ್ಳಿ!

KannadaprabhaNewsNetwork |  
Published : Nov 26, 2026, 02:15 AM IST
ಅರವಿಂದ ಬೆಲ್ಲದ | Kannada Prabha

ಸಾರಾಂಶ

ತಾರಿಹಾಳದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜ್‌ನ ವಿದ್ಯಾರ್ಥಿಗಳಿಗೆ ಮೂಲಸೌಲಭ್ಯ ಸಿಗುತ್ತಿಲ್ಲ. ಸಿಬ್ಬಂದಿಗಳಿನ್ನೂ ಸರ್ಕಾರಿ ನೌಕರರೆಂದು ಪರಿಗಣಿಸುತ್ತಿಲ್ಲ. ಕಾಲೇಜಿನ ಮೇಲಿನ ಋಣಬಾರವೂ ಕಡಿಮೆಯಾಗುತ್ತಿಲ್ಲ.

ಹುಬ್ಬಳ್ಳಿ:

ಇಲ್ಲಿನ ತಾರಿಹಾಳದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜ್‌ನ ವಿದ್ಯಾರ್ಥಿಗಳಿಗೆ ಮೂಲಸೌಲಭ್ಯ ಸಿಗುತ್ತಿಲ್ಲ. ಸಿಬ್ಬಂದಿಗಳಿನ್ನೂ ಸರ್ಕಾರಿ ನೌಕರರೆಂದು ಪರಿಗಣಿಸುತ್ತಿಲ್ಲ. ಕಾಲೇಜಿನ ಮೇಲಿನ ಋಣಬಾರವೂ ಕಡಿಮೆಯಾಗುತ್ತಿಲ್ಲ. ಇನ್ನಾದರೂ ಕಾಲೇಜ್‌ನ ಸುಧಾರಣೆಗೆ ಅಗತ್ಯ ಕ್ರಮಕೈಗೊಳ್ಳಿ!

ಹೀಗೆ ಜನಪ್ರತಿನಿಧಿಗಳು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ವಿಶಾಲವಾದ ಪ್ರದೇಶದಲ್ಲಿ ಕಾಲೇಜ್‌ ಇದ್ದು ಸರ್ಕಾರ ಮನಸು ಮಾಡಿದರೆ ಬರೀ ಡಿಪ್ಲೊಮಾದೊಂದಿಗೆ ಎಂಜಿನಿಯರಿಂಗ್‌ ಕಾಲೇಜ್‌ನ್ನು ಸಹ ತೆರೆಯಬಹುದು. ಈ ಬಗ್ಗೆಯೂ ಯೋಚಿಸುವ ಜತೆಗೆ ಈಗಿನ ಪರಿಸ್ಥಿತಿ ಸುಧಾರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಋಣಬಾರ:

12.9 ಎಕರೆ ವಿಶಾಲ ಪ್ರದೇಶದಲ್ಲಿ ಡಿಪ್ಲೊಮಾ ಕಾಲೇಜ್‌ ಇದ್ದು ಸರ್ಕಾರ ಕಾಲೇಜ್‌ನ್ನು ವಶಕ್ಕೆ ಪಡೆದುಕೊಳ್ಳುವಾಗ ₹ 2.95 ಕೋಟಿ ಸಾಲವಿತ್ತು. ಅದನ್ನು ಮರುಪಾವತಿ ಮಾಡುವುದಾಗಿ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿತ್ತು. ಆದರೆ, ಈ ವರೆಗೂ ಅದರ ಬಗ್ಗೆಯೂ ಕ್ರಮವಾಗಿಲ್ಲ. ಆ ಸಾಲದ ಬಾರ ಇದೀಗ ₹ 5 ಕೋಟಿ ದಾಟಿದೆ ಎಂದು ಮೂಲಗಳು ತಿಳಿಸಿವೆ. ಸಾಲ ಮರುಪಾವತಿ ಮಾಡಿದರೆ ಋಣಬಾರದಿಂದ ಮುಕ್ತವಾಗುತ್ತದೆ ಎಂಬ ಅಭಿಪ್ರಾಯ ಅಲ್ಲಿನ ಸಿಬ್ಬಂದಿಗಳದ್ದು.

ವಾರಕ್ಕೊಮ್ಮೆ ಪ್ರಾಚಾರ್ಯರು:

ಈ ನಡುವೆ ಇಲ್ಲಿನ ಪ್ರಾಚಾರ್ಯರು ನಿವೃತ್ತಿಯಾಗಿದ್ದರೂ ಕೆಇಟಿಗೆ ಹೋಗಿ ತಮ್ಮನ್ನು ಕರ್ತವ್ಯದಿಂದ ಬಿಡುಗಡೆ ಮಾಡದಂತೆ ಆದೇಶ ತೆಗೆದುಕೊಂಡು ಬಂದಿದ್ದಾರೆ. ಆದರೆ, ಇವರಿಗೆ ಇಲಾಖೆಯಾಗಲಿ ಅಥವಾ ಸರ್ಕಾರವಾಗಲಿ ಮುಂದುವರಿಯಲು ಆದೇಶಿಸಿಲ್ಲ. ಆದರೂ ಪ್ರಾಚಾರ್ಯರಾಗಿ ಮುಂದುವರಿದಿದ್ದಾರೆ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಎರಡ್ಮೂರು ಗಂಟೆ ಮಾತ್ರ ಭೇಟಿ ನೀಡುವ ಅವರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕೆಲಸಕ್ಕೆ ತೊಂದರೆಯಾಗುತ್ತಿದೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದು ಒಕ್ಕೊರಲಿನ ಬೇಡಿಕೆಯಾಗಿದೆ.

ಈ ಕಾಲೇಜ್‌ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಬರುತ್ತಿದ್ದು ಈ ಕುರಿತು ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಇಲಾಖೆಗೆ ಪತ್ರ ಕೂಡ ಬರೆದು ಇಲ್ಲಿನ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು, ಸರ್ಕಾರದ ಎಲ್ಲ ಸೌಲಭ್ಯ ನೀಡಬೇಕು, ಜತೆಗೆ ವಾರಕ್ಕೆ ಒಂದೆರಡು ಸಲ ಬರುವ ಪ್ರಾಚಾರ್ಯರರ ಮೇಲೆ ಶಿಸ್ತು ಕ್ರಮಕೈಗೊಂಡು ಆಡಳಿತಾಧಿಕಾರಿ ನೇಮಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ತಾರಿಹಾಳದ ಸರ್ಕಾರಿ ಪಾಲಿಟೆಕ್ನಿಕ್‌ ಸುಧಾರಣೆಯಾಗಬೇಕೆಂಬ ಒತ್ತಾಯ ಜನಪ್ರತಿನಿಧಿಗಳದ್ದು. ಇನ್ನು ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ತಾರಿಹಾಳ ಪಾಲಿಟೆಕ್ನಿಕ್‌ ಕಾಲೇಜನ್ನು ಸರ್ಕಾರ ಈ ಹಿಂದೆ ವಶಕ್ಕೆ ಪಡೆದಿದೆ. ಆದರೆ ಆಗ ಪ್ರಾಚಾರ್ಯರು ಸ್ಟಾಫ್‌ ಲಿಸ್ಟ್‌ ಕಳುಹಿಸದ ಕಾರಣ ಅಲ್ಲಿನ ಸಿಬ್ಬಂದಿ ಸರ್ಕಾರಿ ನೌಕರರಾಗದೆ ಹಾಗೆ ಉಳಿದಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಸಿಬ್ಬಂದಿಗೆ ಅನ್ಯಾಯವಾಗಿದೆ. ಇದನ್ನು ಸರ್ಕಾರ ಸರಿಪಡಿಸಬೇಕು. ಕಾಲೇಜ್‌ ಸುಧಾರಣೆಗೆ ಕ್ರಮಕೈಗೊಳ್ಳಬೇಕು.

ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯರುತಾರಿಹಾಳದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜ್‌ನಲ್ಲಿನ ಪ್ರಾಚಾರ್ಯ ಎ.ಬಿ. ಕುಲಕರ್ಣಿ ಎಂಬುವವರು ನಿವೃತ್ತರಾದರೂ ಕೆಇಟಿಗೆ ಹೋಗಿ ಸೇವೆಯಿಂದ ಬಿಡುಗಡೆಗೊಳಿಸದಿರಲು ಆದೇಶ ತಂದಿದ್ದಾರೆ. ಆದರೆ, ವಾರಕ್ಕೆ ಒಂದೆರಡು ಸಲ ಅಷ್ಟೇ ಕಾಲೇಜ್‌ಗೆ ಬರುತ್ತಾರೆ. ಇದರಿಂದ ಅಲ್ಲಿನ ಶೈಕ್ಷಣಿಕ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಅದಕ್ಕೆ ಶಿಸ್ತು ಕ್ರಮಕೈಗೊಳ್ಳಿ ಎಂದು ಇಲಾಖೆಗೆ ಪತ್ರ ಬರೆದಿದ್ದೇನೆ. ಸಂಬಂಧಪಟ್ಟ ಸಚಿವರ ಗಮನಕ್ಕೂ ತಂದಿದ್ದೇನೆ.

ಅರವಿಂದ ಬೆಲ್ಲದ, ಶಾಸಕರು ಹಾಗೂ ವಿಧಾನಸಭೆ ಪ್ರತಿಪಕ್ಷದ ಉಪನಾಯಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗರ್ಭಿಣಿಯಾದ ಅಪ್ರಾಪ್ತೆ: ಪೋಕ್ಸೋ ಕೇಸ್‌ ದಾಖಲು
ಇಳಕಲ್ಲಿಗೆ ಬಂತು ಕನ್ನಡ ಬಂಡಾರದ ರಥ