ಗದಗ: ಜಿಲ್ಲೆಯಲ್ಲಿ ಡೆಂಘೀ ಹಾಗೂ ಇತರೆ ಕೀಟಜನ್ಯ ರೋಗಗಳು ಹರಡದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸೊಳ್ಳೆ ಉತ್ಪತ್ತಿಯಾಗುತ್ತಿರುವ ಸ್ಥಳಗಳನ್ನು ಗುರುತಿಸಿ ಸೊಳ್ಳೆ ನಾಶಕ ದ್ರಾವಣವನ್ನು ಸಿಂಪಡಿಸಬೇಕು. ಶಾಲೆಗಳಲ್ಲಿ ಕಡ್ಡಾಯವಾಗಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಬಸ್ ಡಿಪೋಗಳಲ್ಲಿ ಖಾಲಿ ಟೈರ್‌ಗಳಲ್ಲಿ ಹಾಗೂ ಘನತ್ಯಾಜ್ಯಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಖಾಲಿ ಟೈರ್‌ಗಳ ಮೇಲೆ ಟಾರ್ಪಾಲನ್ ಹಾಕಿ, ಅವುಗಳನ್ನು ತಕ್ಷಣ ವಿಲೇವಾರಿ ಮಾಡಲು ಕ್ರಮ ವಹಿಸಬೇಕು ಎಂದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ಮಾಹಿತಿ ನೀಡಿ, ಜಿಲ್ಲೆಯಲ್ಲಿ 2026ರ ಜನವರಿಯಿಂದ ಏಪ್ರಿಲ್‌ವರೆಗೆ ಮಲೇರಿಯಾ ಪ್ರಕರಣಗಳಿಗೆ ಸಂಬಂಧಿಸಿದಂತೆ 1,20,029 ರಕ್ತಲೇಪನ ಪರೀಕ್ಷೆಗಳನ್ನು ಕೈಗೊಳ್ಳಲಾಗಿದ್ದು, 2 ಪ್ರಕರಣಗಳು ಖಚಿತಪಟ್ಟಿವೆ. ಡೆಂಘೀ ರೋಗಕ್ಕೆ ಸಂಬಂಧಿಸಿದಂತೆ 607 ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 17 ಪ್ರಕರಣಗಳು ಹಾಗೂ ಚಿಕೂನ್ ಗುನ್ಯಾಕ್ಕೆ ಸಂಬಂಧಿಸಿದಂತೆ 109 ರಕ್ತದ ಮಾದರಿ ಪರೀಕ್ಷಿಸಲಾಗಿದ್ದು, 7 ಪ್ರಕರಣಗಳು ಖಚಿತಪಟ್ಟಿವೆ ಎಂದರು.ಸಹಾಯಕ ಕೀಟಶಾಸ್ತ್ರಜ್ಞರಾದ ಅನ್ನಪೂರ್ಣ ಶೆಟ್ಟರ್ ಅವರು ಸೊಳ್ಳೆಯ ಜೀವನಚಕ್ರ ಹಾಗೂ ಲಾರ್ವಾಹಾರಿ ಮೀನುಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ ಅವರು ಸ್ವಾಗತಿಸಿ, ಸಭೆಯ ಉದ್ದೇಶಗಳನ್ನು ವಿವರಿಸಿದರು.