ಕನ್ನಡಪ್ರಭ ವಾರ್ತೆ ಗುಳೇದಗುಡ್ಡ/ಬಾದಾಮಿರಾಜ್ಯ ಸರ್ಕಾರ ಕಾಲಹರಣ ಮಾಡದೇ ಬರಪೀಡಿತ ಜಿಲ್ಲೆಗಳ ರೈತರಿಗೆ ತಕ್ಷಣ ₹ 25 ಸಾವಿರ ಬೆಳೆ ಪರಿಹಾರ, ರೈತರ ಸಾಲಮನ್ನಾ ಮಾಡಿ ಅವರು ಸಾಲ ಮಾಡಿದ ಬ್ಯಾಂಕುಗಳಿಂದ ರೈತರ ಆಸ್ತಿ ಜಪ್ತ ಆಗದಂತೆ ಕ್ರಮ ವಹಿಸಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ/ಬಾದಾಮಿ
ರಾಜ್ಯ ಸರ್ಕಾರ ಕಾಲಹರಣ ಮಾಡದೇ ಬರಪೀಡಿತ ಜಿಲ್ಲೆಗಳ ರೈತರಿಗೆ ತಕ್ಷಣ ₹ 25 ಸಾವಿರ ಬೆಳೆ ಪರಿಹಾರ, ರೈತರ ಸಾಲಮನ್ನಾ ಮಾಡಿ ಅವರು ಸಾಲ ಮಾಡಿದ ಬ್ಯಾಂಕುಗಳಿಂದ ರೈತರ ಆಸ್ತಿ ಜಪ್ತ ಆಗದಂತೆ ಕ್ರಮ ವಹಿಸಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬುಧವಾರ ಬಾದಾಮಿ ಮತಕ್ಷೇತ್ರದ ಬದಾಮಿ ಮತ್ತು ಗುಳೇದಗುಡ್ಡ ತಾಲೂಕುಗಳ ವಿವಿಧ ಗ್ರಾಮಗಳ ಬರಪೀಡಿತ ಪ್ರದೇಶಗಳ ಭೇಟಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟದ ವಿಸ್ತರಣೆಯ ಹೋರಾಟದಲ್ಲಿ ಮಂತ್ರಿ ಸ್ಥಾನ ಪಡೆಯಲು ಬಹಳ ಬ್ಯೂಜಿ ಆಗಿದ್ದಾರೆ. ದೊಡ್ಡ, ದೊಡ್ಡ ಅಗ್ರಗಣ್ಯ ನಾಯಕರು ದೆಹಲಿಗೆ ಪ್ರವಾಸ ಮಾಡುವುದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಸಭೆ, ಸಮಾರಂಭಗಳಲ್ಲಿ ರೈತರ ಬಗ್ಗೆ ದೊಡ್ಡದಾಗಿ ಭಾಷಣ ಮಾಡುವ ಇವರಿಗೆ ಅನ್ನದಾತರ ಕೂಗು ಕೇಳುತ್ತಿಲ್ಲ.
ರೈತರಿಗೆ ರಿಯಲ್ ಎಸ್ಟೇಟ್ ದಂಧೆ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಯಾರಿಗೆ ಪ್ರಾಮುಖ್ಯತೆ ನೀಡುತ್ತಿದೆ ಗೊತ್ತಿಲ್ಲ. ಆದರೆ, ಈ ಸರ್ಕಾರದಲ್ಲಿ ರಿಯಲ್ ಎಸ್ಟೇಟ್ ದಾರರಿಗೆ, ದಲ್ಲಾಳಿಗಳಿಗೆ, ಏಜಂಟರಿಗೆ, ಬ್ರೋಕರ್ ಗಳಿಗೆ ಪ್ರಾತಿನಿಧ್ಯ ಸಿಗುತ್ತಿದೆ.
ಬೇಕಾದವರಿಗೆ ಗ್ಯಾರಂಟಿ ಯೋಜನೆ ಸಿಕ್ಕಿಲ್ಲ : ಈ ಸರ್ಕಾರ ಯಾರಿಗೆ ಗ್ಯಾರಂಟಿ ಯೋಜನೆ ಕೊಟ್ಟಿದೆ. ಕೊಡಬೇಕಾದವರಿಗೆ ಕೊಡದೇ ರೈತರಿಗೆ ಅನ್ಯಾಯ ಮಾಡಿದೆ. ರೈತರಿಗಾಗಿ ಗ್ಯಾರಂಟಿ ಯೋಜನೆ ಮಾಡದೇ ಬೇರೆ ವರ್ಗದವರಿಗೆ ಮಾಡಿ, ಯೋಜನೆಗಳಲ್ಲಿಯೂ ರೈತರನ್ನು ಮರೆತು ಸರ್ಕಾರ ಅನ್ಯಾಯ ಮಾಡಿದೆ ಎಂದು ಟೀಕಿಸಿದರು. ಈ ಸರ್ಕಾರ ಯಾವುದೇ ಪ್ರಾಜೆಕ್ಟ್ ಮಾಡಿದರೂ ಅದು ರೂ.36 ಸಾವಿರ ಕೋಟಿಗಿಂತಲೂ ಕಡಿಮೆ ಆಗುವುದಿಲ್ಲ. ಬಿಡದಿಯಲ್ಲೂ ₹ 35 ಸಾವಿರ ಕೋಟಿ ಕಣ್ಮುಂದೆ ಕಾಣುತ್ತಿದೆ. ಇವರು ಟನಲ್ ರಸ್ತೆ ಯಾರಿಗೆ ಮಾಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಎಲ್ಲ ಜಿಲ್ಲೆಗಳಿಗೂ ತಂಡ ಭೇಟಿ ನೀಡಿ, ಬರದ ವಾಸ್ತವ ಚಿತ್ರಣದ ಅಧ್ಯಯನದ ವರದಿಯನ್ನು ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಣ್ಣನವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರಕ್ಕೆ, ಮತ್ತು ರಾಜ್ಯಪಾಲರಿಗೆ ನೀಡುವುದಾಗಿ ತಿಳಿಸಿದರು. ಬರ ಪರಿಹಾರ ಹಣಕ್ಕಾಗಿ ಕೇಂದ್ರದ ಕಡೆ ಬೊಟ್ಟು ಮಾಡಬೇಡಿ, ಮೊದಲು ನೀವು ಕೊಡಿ. ಕೇಂದ್ರದವರು ನಂತರ ಕೊಟ್ಟೆ ಕೊಡುತ್ತಾರೆ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.
ಹಂಸನೂರ ಗ್ರಾಮದ ರಂಗಪ್ಪ ಬೂದಿಹಾಳ ಅವರ ಹೊಲದಲ್ಲಿಯ ಜೋಳ ಹಾಗೂ ತೊಗರಿ ಬಿತ್ತಿರುವುದನ್ನು ವೀಕ್ಷಿಸಿದರು. ತಿಮ್ಮಸಾಗರದಲ್ಲಿ ಕಿನಾಲ್ ಸಮಸ್ಯೆ, ಬೆಳೆ ವಿಮೆಯಲ್ಲಿಯ ತಾರತಮ್ಯ ಮುಂತಾದ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ, ಅಧ್ಯಯನದ ತಂಡದ ಮುಖಂಡರನ್ನು ಸ್ವಾಗತಿಸಿದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಂಶಪೂರ, ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾ ರೆಡ್ಡಿ, ಜೇವರ್ಗಿ ಶಾಸಕ ಶರಣಗೌಡ ಕಂಕಣರ, ಮಾಜಿ ಶಾಸಕ ದೊಡ್ಡನಗೌಡ, ಶಾಸಕಾಂಗ ಪಕ್ಷದ ನಾಯಕ ಸುರೇಶಬಾಬು ಮಾತನಾಡಿದರು.
ಮತಕ್ಷೇತ್ರದ ಮತ್ತು ಜಿಲ್ಲೆಯ ಜೆಡಿಎಸ್ ಮುಖಂಡರಾದ ಚಂದ್ರು ಜಾಲಿಹಾಳ, ಮುತ್ತಣ್ಣ ಕಳ್ಳಿಗುಡ್ಡ, ಅನ್ವರಖಾನ್ ಪಠಾಣ, ರಾಘು ಬಳಿಗೇರ, ಚಂದ್ರಕಾಂತ ಶೇಖಾ, ಮಹೇಶ ಬಿಜಾಪೂರ, ಸಂತೋಷ ನಾಯನೇಗಲಿ, ಟಿ.ಎಸ್.ಬೆನಕಟ್ಟಿ ಪಿಂಟು ರಾಠೋಡ, ಬೋರಮ್ಮ ನಿಡಗುಂದಿ ಸೇರಿದಂತೆ ಇತರರು ಇದ್ದರು.
ಉತ್ತರ ಕರ್ನಾಟಕದ ಬಗ್ಗೆ ಜೆಡಿಎಸ್ ಯಾವತ್ತೂ ತರತಮ್ಯ ಮಾಡಿಲ್ಲ. ಒಂದು ವರ್ಗಕ್ಕೆ, ಒಂದು ಜಿಲ್ಲೆಗೆ ಜೆಡಿಎಸ್ ಸೀಮಿತವಾಗಿ ರಾಜಕಾರಣ ಮಾಡುತ್ತ ಬಂದಿಲ್ಲ. ನಾನು ಸಕ್ರಿಯವಾಗಿ ರಾಜಕಾರಣಕ್ಕೆ ಬಂದಾಗಿನಿಂದ ದೇವೆಗೌಡರ ಹಾಗೂ ಕುಮಾರಣ್ಣವರ ಆಡಳತದ ಅವಧಿಯಲ್ಲಿಯೂ ಉತ್ತರ ಕರ್ನಾಟಕದ ನೀರಾವರಿಗೆ ಅತೀ ಪ್ರಾಮುಖ್ಯತೆ ನೀಡಿದ್ದರು. ಕುಮಾರಣ್ಣ ಮುಖ್ಯ ಮಂತ್ರಿಗಳಾಗಿದ್ದಾಗ ಗ್ರಾಮ ವಾಸ್ತವ್ಯ ಮಾಡಿದ್ದರ ಪರಿಣಾಮವಾಗಿ ಅವು ಸುವರ್ಣ ಗ್ರಾಮಗಳಾಗಿ ಪರಿವರ್ತನೆಯಾಗಿವೆ ಎಂದು ಇಲ್ಲಿಯ ಜನರೇ ಹೇಳುತ್ತಾರೆ.
-ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಜೆಡಿಎಸ್ ಯುವ ಘಟಕ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.