ಗ್ಯಾರಂಟಿ ಅನುಷ್ಠಾನಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ: ಮೆಹರೋಜ್ ಖಾನ್

KannadaprabhaNewsNetwork |  
Published : Aug 30, 2024, 01:11 AM IST
28ಕೆಪಿಎಲ್28 ಕೊಪ್ಪಳ ಜಿಲ್ಲಾ ಪಂಚಾಯತ್ ಸಮಿತಿ ಕೋಠಡಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆ | Kannada Prabha

ಸಾರಾಂಶ

ಗ್ಯಾರಂಟಿ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಕಾರ್ಯಕ್ರಮವಾಗಿದೆ.

ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸಮಾಜದ ಕಟ್ಟಕಡೆ ವ್ಯಕ್ತಿಗೂ ಆರ್ಥಿಕ ಸಬಲೀಕರಣಕ್ಕೆ ತುಂಬಾ ಸಹಕಾರಿಯಾಗಿರುವ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಮೆಹರೋಜ್ ಖಾನ್ ಸೂಚಿಸಿದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಕೊಪ್ಪಳ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಕಾರ್ಯಕ್ರಮವಾಗಿದೆ. ಅರ್ಹರೆಲ್ಲರೂ ಗ್ಯಾರಂಟಿ ಯೋಜನೆಗಳ ವ್ಯಾಪ್ತಿಗೆ ಒಳಪಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಯಾವುದೇ ಅರ್ಹ ಫಲಾನುಭವಿಗಳು ಈ ಯೋಜನೆಯಿಂದ ಹೊರಗುಳಿಯಬಾರದು. ಈ ಹಿನ್ನೆಲೆ ಪ್ರಾಮಾಣಿಕವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮಾಡಬೇಕು. ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಯುವನಿಧಿ ಸೇರಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಉಂಟಾಗುತ್ತಿರುವ ಸಣ್ಣ-ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಒಂದು ತಿಂಗಳೊಳಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ಲಾಭ ದೊರಕಿಸಿ, ಐದು ಗ್ಯಾರಂಟಿ ಯೋಜನೆಗಳಡಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು.

ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ಸರ್ಕಾರ ನೇಮಕ ಮಾಡಿದೆ. ಎಲ್ಲ ತಾಲೂಕು ಮಟ್ಟದ ಸಭೆಗಳಿಗೆ ತಾಲೂಕು ಸಮಿತಿ ಅಧ್ಯಕ್ಷರನ್ನು ಆಹ್ವಾನಿಸಬೇಕು. ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಇಲಾಖೆಗಳು ಅವರಿಗೆ ಅಗತ್ಯ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗೃಹಲಕ್ಷ್ಮಿ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 3,31,365 ಪಡಿತರ ಚೀಟಿಗಳನ್ನು ಹೊಂದಿರುವ ಫಲಾನುಭವಿಗಳಿದ್ದು, 3,20,150 ಮಹಿಳೆಯರಿಗೆ ಪ್ರತಿ ತಿಂಗಳು ₹2,000 ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 2,73,175 ಫಲಾನುಭವಿಗಳು ಗೃಹ ಜ್ಯೋತಿ ಯೋಜನೆಯಡಿ ನೋಂದಣಿಯಾಗಿದ್ದು, ಇವರೆಲ್ಲರೂ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಯುವನಿಧಿ ಯೋಜನೆ ಜನವರಿ-2024ರಿಂದ ಜಾರಿಯಾಗಿದ್ದು,ಅಂದಿನಿಂದ ಜುಲೈ-2024ರ ವರೆಗೆ ಒಟ್ಟು 8,335 ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ ಹಣ ಪಾವತಿಸಲಾಗಿದೆ. ಇದರಲ್ಲಿ 8,229 ಪದವಿಧರರಿಗೆ ತಿಂಗಳಿಗೆ ₹3,000ದಂತೆ ಹಾಗೂ 106 ಡಿಪ್ಲೋಮಾ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹1,500ರಂತೆ ಒಟ್ಟು 8,335 ವಿದ್ಯಾರ್ಥಿಗಳಿಗೆ ₹2.48 ಕೋಟಿ ಪಾವತಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಅಧಿಕಾರಿಗಳು ಮಾಹಿತಿ ನೀಡಿದರು.

ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 3,04,104 ಪಡಿತರ ಚೀಟಿಗಳ ಫಲಾನುಭವಿಗಳು ಅರ್ಹರಿದ್ದು, ಇದರಲ್ಲಿ 2,95,168 ಫಲಾನುಭವಿಗಳಿಗೆ ಜುಲೈ-2023 ರಿಂದ ಜೂನ್-2024ರ ವರೆಗೆ ಒಟ್ಟು ₹ 209.72 ಕೋಟಿ ವೆಚ್ಚ ಭರಿಸಲಾಗಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು.

ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ₹4.69 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು, ಇದರಿಂದ ಸಾರಿಗೆ ಆದಾಯ ₹162.17 ಕೋಟಿ ಆಗಿದೆ ಎಂದು ಕಲ್ಯಾಣ ಕರ್ನಾಟಕದ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ಜಿಪಂ ಸಿಇಒ ರಾಹುಲ್‌ ರತ್ನಂ ಪಾಂಡೆಯ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಟಿ. ಖಾದ್ರಿ, ಚಂದ್ರಶೇಖರ ನಾಲತವಾಡ, ಖಾಸೀಂಸಾಬ್ ಮರ್ದಾನ್ ಸಾಬ್ ಹಾಗೂ ನಾಗರಾಜ ಅರಳಿ, ಸದಸ್ಯರಾದ ಜ್ಯೋತಿ ಎಂ. ಗೊಂಡಬಾಳ, ಮಲ್ಲಪ್ಪ ಯಮನಪ್ಪ ಜಕಲಿ, ಬಾಲಚಂದ್ರ ಸ್ಯಾಮುವೆಲ್, ಸೋಮನಾಥ ದೊಡ್ಡಮನಿ, ಫಾರೂಖ್ ದಲಾಯತ್, ಶಕುಂತಲಾ, ಕುಷ್ಟಗಿಯ ಶಾರದಾ ಕಟ್ಟಿಮನಿ, ಹನುಮಸಾಗರದ ಮೈನುದ್ದೀನ್ ಖಾಜಿ, ಹಜರತ್ ಹುಸೇನ್, ಮಲ್ಲಪ್ಪ ಭಂಡಾರಿ, ಸುಧೀರ್ ಶಾಮಾಚಾರ, ಆನಂದ ಹಾಸಲಕರ, ದೇವಪ್ಪ ಬಾವಿಕಟ್ಟಿ, ವೆಂಕಟೇಶ್ ಬಾಬು, ಸಂಗಪ್ಪ ವೀರಪ್ಪ ಗುತ್ತಿ ಸೇರಿದಂತೆ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ