ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳಿ: ತಂಗಡಗಿ

KannadaprabhaNewsNetwork | Updated : Nov 05 2024, 12:41 AM IST

ಸಾರಾಂಶ

ಹಂತ ಹಂತವಾಗಿ ಆದ್ಯತೆ ಮೇರೆಗೆ ಗ್ರಾಮದಲ್ಲಿನ ಎಲ್ಲ ತಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು.

ಅಧಿಕಾರಿಗಳಿಗೆ ಸೂಚನೆ । ಕುಂದು-ಕೊರತೆ ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ

ಕನ್ನಡಪ್ರಭ ವಾರ್ತೆ ನವಲಿ

ಶುದ್ಧ ಕುಡಿಯುವ ನೀರಿನ ಘಟಕ, ಒಳಚರಂಡಿ, ಶಾಲಾ ಕಟ್ಟಡ ನಿರ್ಮಾಣ, ಅಂಗನವಾಡಿ ಕಟ್ಟಡ, ರಸ್ತೆ, ಸಿಸಿ ರಸ್ತೆ ನಿರ್ಮಾಣ, ನ್ಯಾಯ ಬೆಲೆ ಅಂಗಡಿ, ಕೆರೆ ನಿರ್ಮಾಣ, ಪೋಡಿ ಮುಕ್ತ ಗ್ರಾಮ, ನಿವೇಶನ ಹಕ್ಕುಪತ್ರ ವಿತರಣೆ ಸೇರಿದಂತೆ ಗ್ರಾಪಂ ವ್ಯಾಪ್ತಿಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ಕನಕಗಿರಿ ತಾಲೂಕಿನ ಚಿರ್ಚನಗುಡ್ಡ ತಾಂಡಾ, ಚಿರ್ಚನಗುಡ್ಡ, ಹೀರೆಡಂಕನಕಲ್ ಹಾಗೂ ಬಸವೇಶ್ವರ ಕ್ಯಾಂಪ್‌ಗೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಾರ್ವಜನಿಕರ ಸಭೆ ನಡೆಸಿ ಗ್ರಾಮಸ್ಥರ ಕುಂದು-ಕೊರತೆ ಆಲಿಸಿ ಮಾತನಾಡಿದರು.ಚುನಾವಣಾ ಪೂರ್ವದಲ್ಲಿ ನಿಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೆ. ಹೀಗಾಗಿ ಖುದ್ದು ನಿಮ್ಮ ಗ್ರಾಮಗಳಿಗೆ ಭೇಟಿ ನೀಡಿ, ಸಮಸ್ಯೆ ಆಲಿಸುತ್ತಿದ್ದೇನೆ. ಹಂತ ಹಂತವಾಗಿ ಆದ್ಯತೆ ಮೇರೆಗೆ ಗ್ರಾಮದಲ್ಲಿನ ಎಲ್ಲ ತಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.

ಚಿಕ್ಕಡಂಕನಕಲ್ ಗ್ರಾಮದಿಂದ ಗುಂಡೂರು ಕ್ರಾಸ್‌ನವರೆಗೆ ₹6 ಕೋಟಿ ಅನುದಾನದಲ್ಲಿ ಸಂಪರ್ಕ ಸೇತುವೆ ಹಾಗೂ 4 ಎಕರೆ ಭೂಮಿಯಲ್ಲಿ ಕೆರೆ ನಿರ್ಮಾಣ ಮಾಡಲಾಗುತ್ತಿದೆ. ಶೀಘ್ರವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾ‌ಣ, ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.ಚಿರ್ಚನಗುಡ್ಡ ಗ್ರಾಮಕ್ಕೆ ಹಲವು ವರ್ಷ ಕಳೆದರೂ ಇನ್ನು ಸ್ಮಶಾನಕ್ಕೆ ಭೂಮಿ ನೀಡಿಲ್ಲ. ಹೀರೆಡಂಕನಕಲ್ ಗ್ರಾಮವನ್ನು ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡಿಕೊಡಬೇಕೆಂದು ರೈತರು ಮತ್ತು ಗ್ರಾಮಸ್ಥರು ಮನವಿ ಮಾಡಿದರು.

ಒಂದು ತಿಂಗಳಲ್ಲಿ ಹಕ್ಕುಪತ್ರ ವಿತರಣೆ ಆಗಬೇಕು ಎಂದು ತಹಸೀಲ್ದಾರ ವಿಶ್ವನಾಥ ಮುರಡಿಗೆ ಸೂಚಿಸಿದರು‌.

ಗ್ರಾಪಂ ವ್ಯಾಪ್ತಿಯಲ್ಲಿ ಅಗತ್ಯವಿರುವ ಕಡೆ ಸಿಸಿ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು. ತಮ್ಮ ಎಲ್ಲ ಬೇಡಿಕೆಗಳನ್ನು ಪಟ್ಟಿ ಮಾಡಿಕೊಳ್ಳಲಾಗಿದೆ. ಐದು ವರ್ಷದಲ್ಲಿ ಇಡೀ ಕ್ಷೇತ್ರ ಅಭಿವೃದ್ಧಿಪಡಿಸಲು ಪಣ ತೊಡಲಾಗಿದೆ ಎಂದು ತಂಗಡಗಿ ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿ ಕೆ. ರಾಜಶೇಖರ, ಚಿಕ್ಕಡಂಕನಕಲ್ ಗ್ರಾಪಂ ಅಧ್ಯಕ್ಷೆ ನೀಲಮ್ಮ ಬಸವರಾಜ, ಉಪಾಧ್ಯಕ್ಷ ರಾಮಚಂದ್ರಗೌಡ, ಸದಸ್ಯರು, ಗ್ರಾಮದ ಮುಖಂಡರು, ಗ್ರಾಮಸ್ಥರು ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ‌

Share this article