ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಮಟ್ಟದ ಕ್ರೀಡಾಕೂಟಗಳಿಗೆ ಚಾಲನೆ ನೀಡಿದ ವಿಧಾನಸಭೆ ಉಪಸಭಾಧ್ಯಕ್ಷಕನ್ನಡಪ್ರಭ ವಾರ್ತೆ ಹಾವೇರಿ
ಸರ್ಕಾರಿ ನೌಕರರು ದಿನವೀಡಿ ಕಚೇರಿ ಹಾಗೂ ಇಲಾಖೆ ಕೆಲಸದ ಕಾರ್ಯಗಳಲ್ಲಿ ಒತ್ತಡದ ಬದುಕಿನಲ್ಲಿ ಮುಳುಗಿ ಬಿಟ್ಟಿರುತ್ತಾರೆ. ಅಂತಹ ಒತ್ತಡದ ಬದುಕಿನ ಮಧ್ಯೆಯೂ ಕ್ರೀಡಾಕೂಟಗಳು ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮನಸ್ಸಿಗೆ ನೆಮ್ಮದಿ ಪಡೆದುಕೊಳ್ಳಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಮಟ್ಟದ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಮಾತನಾಡಿದರು.
ಎಲ್ಲಾ ಸರ್ಕಾರಿ ನೌಕರರು ಕ್ರೀಡಾಕೂಟದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸರ್ಕಾರಿ ನೌಕರ ಕ್ರೀಡಾಪಟುಗಳು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿರ್ಣಾಯಕರ ನಿರ್ಣಯವೇ ಅಂತಿಮ. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯ, ಆದರೆ ಆಟದಲ್ಲಿ ಭಾಗವಹಿಸುವುದು ಅತೀ ಮುಖ್ಯ. ಕ್ರೀಡೆಯಿಂದ ಉತ್ತಮ ಆರೋಗ್ಯ ಸಿಗಲಿದ್ದು, ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಅದೇ ರೀತಿ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಈಡೇರಿಸುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಸುತ್ತಾರೆ ಎಂದರು.ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಸರ್ಕಾರ ಹಾಗೂ ಸರ್ಕಾರಿ ನೌಕರರಿಂದ ಸಮಾಜದಲ್ಲಿ ಜನಸಾಮಾನ್ಯರಿಗೆ ಜಾಗೃತಿ, ಅರಿವು ಮೂಡುವುದರಿಂದ ನೇರವಾಗಿ ಕಚೇರಿಗೆ ಬಂದು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಾರೆ. ಸರ್ಕಾರಿ ನೌಕರರು ಹಾಗೂ ಜನಪ್ರತಿನಿಧಿಗಳು ಸಮನಾಗಿ ಹೋದರೆ ಆಡಳಿತ ಚೆನ್ನಾಗಿ ನಡೆಯುತ್ತದೆ. ನೌಕರರು ಪ್ರೀತಿ, ವಿಶ್ವಾಸ ಆತ್ಮೀಯತೆಯಿಂದ ಮುನ್ನಡೆಯಬೇಕು. ಎನ್‌ಪಿಎಸ್ ರದ್ದತಿ ಮಾಡಿ ಒಪಿಎಸ್ ಜಾರಿಗೆ, ಏಳನೇ ವೇತನ ಆಯೋಗ ವರದಿ ಅನುಷ್ಠಾನಕ್ಕೆ ತರುವ ಬಗ್ಗೆ ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದರು.
ವಿವಿಧ ಕ್ರೀಡೆಗಳು: ಕ್ರೀಡಾಕೂಟದ ಮೊದಲ ದಿನ ಮಹಿಳೆಯರು ಮತ್ತು ಪುರುಷ ವಿಭಾಗದಲ್ಲಿ 100 ಮೀ. ಓಟ, 200 ಮೀ. ಓಟ, 1500 ಮೀ. ಓಟ, 3000 ಮೀ. ಓಟ, ಜಿಗಿತ, ಎಸೆತದ ಸ್ಪರ್ಧೆಗಳು, ಚೆಸ್ ಸ್ಪರ್ಧೆ, ಕೇರಂ, ಷಟಲ್ ಬ್ಯಾಡ್ಮಿಂಟನ್, ಯೋಗ ಸ್ಪರ್ಧೆ, ಪುರುಷರ ವಾಲಿಬಾಲ್, ಮಹಿಳೆಯರ ಥ್ರೋಬಾಲ್, ವಾಲಿಬಾಲ್, ಕಬ್ಬಡ್ಡಿ, ಖೋಖೋ, ಬಾಲ್ ಬ್ಯಾಡ್ಮಿಂಟನ್, ಟೆಬಲ್ ಟೆನಿಸ್ ಸ್ಪರ್ಧೆಗಳು ನಡೆದವು.ಕಾರ್ಯಕ್ರಮದಲ್ಲಿ ಅಶೋಕ ಗದ್ದಿಗೌಡರ ಕ್ರೀಡಾಜ್ಯೋತಿ ಸ್ವೀಕರಿಸಿದರು. ಸಿ.ಎಚ್ ಹೊಟ್ಟಿಗೌಡ್ರ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಆರ್.ವಿ. ಚಿನ್ನಿಕಟ್ಟಿ, ಲತಾ ಬಿ.ಎಚ್., ಮೋತಿಲಾಲ್ ಪವಾರ, ರಾಘವೇಂದ್ರ ಬಾಸೂರ, ಶಂಕರ ಮೆಹರವಾಡೆ, ಎಸ್.ಜಿ. ಸುಣಗಾರ, ಸಿ.ಜಿ. ಬ್ಯಾಡಗಿ, ವಾಚಪ್ಪ ಲಮಾಣಿ, ಎಂ.ಡಿ. ದ್ಯಾಮಣ್ಣವರ, ಸಿ.ಎನ್. ಲಕ್ಕನಗೌಡ್ರ, ಅರುಣ ಹುಡೇದಗೌಡ್ರ, ಎಂ.ಎಂ. ಕರಿಯಣ್ಣವರ, ರವಿ ಕೊರವರ, ಕೆ.ಎಸ್. ಚಿಕ್ಕೇರಿ, ಎಂ.ಬಿ. ಶಾಂತಗಿರಿ, ಬಿ.ಎಸ್. ಚಲ್ಲಾಳ, ಬಸವರಾಜ ಹಾದಿಮನಿ, ಶಂಕರ ಸುತಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸನ್ಮಾನ: ಇದೇ ವೇಳೆಯಲ್ಲಿ ವಿವಿಧ ಇಲಾಖೆಗಳಲ್ಲಿ ಗಣನೀಯ ಸೇವೆಗೈದ ಸಾಧಕರನ್ನು, ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪಾಲ್ಗೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಅಂಗನವಾಡಿ ಕೇಂದ್ರ ವಿಭಾಗ, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ವಿಭಾಗದಲ್ಲಿ, ಪಿಯು ಕಾಲೇಜು ವಿಭಾಗದಲ್ಲಿ ವಿದ್ಯಾರ್ಥಿಗಳ ಏಳ್ಗೆಗೆ ಶ್ರಮಿಸಿದ ಅತ್ಯುತ್ತಮ ಸೇವೆ ಸಲ್ಲಿಸಿರುವ ಮುಖ್ಯಸ್ಥರಿಗೆ ಸನ್ಮಾನಿಸಲಾಯಿತು.