ಕನ್ನಡಪ್ರಭ ವಾರ್ತೆ ಸವದತ್ತಿ
ಕಳೆದ ಒಂದು ವಾರದಿಂದ ಪಟ್ಟಣದಲ್ಲಿನ ಸಾರ್ವಜನಿಕರಿಗೆ ಜ್ವರ, ವಾಂತಿ ಭೇದಿಯಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಆರೋಗ್ಯದ ಕುರಿತು ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮುಂಜಾಗ್ರತೆ ವಹಿಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವೈದ್ಯರುಗಳ ಸಮ್ಮುಖದಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸುರಿದ ಮಳೆಯಿಂದಾಗಿ ನದಿಗೆ ಹೊಸ ನೀರು ಬರುತ್ತಿದ್ದು, ಸಾರ್ವಜನಿಕರು ಈ ನೀರನ್ನು ಕಾಯಿಸಿ ಆರಿಸಿ ಸೇವಿಸುವುದರ ಜೊತೆಗೆ ಬಿಸಿಯಾದ ಆಹಾರವನ್ನು ಸೇವಿಸಿ ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು ಎಂದರು.ಪುರಸಭೆಯವರು ಕುಡಿಯುವ ನೀರನ್ನು ಸಂಪೂರ್ಣ ಶುದ್ಧೀಕರಣಗೊಳಿಸಿ ಪೂರೈಕೆ ಮಾಡುತ್ತಿದ್ದು, ಕೆಲವು ಸಮಯದಲ್ಲಿ ವೈರಲ್ ಸಮಸ್ಯೆಯಾಗುತ್ತಿರುವುದರಿಂದ ಸಾರ್ವಜನಿಕರು ಜಾಗೃತೆ ವಹಿಸಬೇಕು. ಕೆಲವು ದಿನಗಳ ಮಟ್ಟಿಗೆ ರಸ್ತೆ ಬದಿಯ ಪಾಸ್ಟ್ ಪುಡ್ ವ್ಯಾಪಾರಸ್ಥರಿಗೆ ನೋಟಿಸ್ ನೀಡುವ ಮೂಲಕ ರಸ್ತೆ ಬದಿಯ ಅಂಗಡಿಗಳನ್ನು ಬಂದಮಾಡಲು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ಸಾರ್ವಜನಿಕರ ಆರೋಗ್ಯದ ದೃಷ್ಟಿಕೋನದಲ್ಲಿ ತಾಲೂಕು ಆಡಳಿತ ಸಂಪೂರ್ಣ ಸಹಕಾರ ನೀಡುತ್ತಿದ್ದು, ಸಾರ್ವಜನಿಕರು ಆರೋಗ್ಯದ ಕಡೆಗೆ ಗಮನ ಹರಿಸಿ ಸಮಸ್ಯೆ ಕಂಡು ಬಂದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ತಕ್ಷಣ ಆರೋಗ್ಯ ಪರೀಕ್ಷಿಕೊಳ್ಳಬೇಕು ಎಂದು ತಿಳಿಸಿದರು.ಟಿಎಚ್‌ಒ ಡಾ.ಶ್ರೀಪಾದ ಸಬನೀಸ ಮತ್ತು ಮುಖ್ಯವೈದ್ಯಾಧಿಕಾರಿ ಡಾ.ಮಲ್ಲನಗೌಡರ ಮಾತನಾಡಿ, ಕಳೆದ 15ದಿನಗಳಲ್ಲಿ ಪಟ್ಟಣದಲ್ಲಿ 65 ಜನರಲ್ಲಿ ವಾಂತಿ ಭೇದಿಯಂತ ಸಮಸ್ಯೆಗಳು ಕಂಡು ಬಂದಿದ್ದು, ಅದರಲ್ಲಿ 35 ಜನರು ಗುಣಮುಖರಾಗಿದ್ದು, 30 ಜನರು ಚಿಕಿತ್ಸೆಪಡೆದುಕೊಳ್ಳುತ್ತಿದ್ದಾರೆ ಎಂದರು. ಜನರು ತಮ್ಮ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದಲ್ಲಿ ನಕಲಿ ವೈದ್ಯರ ಬಳಿಗೆ ಹೋಗದೆ ನೇರವಾಗಿ ಸಾರ್ವಜನಿಕ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಬೇಕು. ಆಸ್ಪತ್ರೆಯಲ್ಲಿ ಸಾಕಷ್ಟು ಔಷಧಿಗಳಿದ್ದು, ಉಪಚಾರಕ್ಕೆ ಸಿಬ್ಬಂದಿ ಕೊರತೆ ಇಲ್ಲ ಎಂದರು. ಪ್ರತಿ ಮನೆ ಮನೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ಜನರ ಆರೋಗ್ಯದ ಕಾಳಜಿ ಕುರಿತು ಮಾಹಿತಿ ನೀಡುತ್ತಿದ್ದು, ಸ್ವಚ್ಛತೆಯ ಕಡೆಗೆ ಜನರು ವಿಶೇಷ ಗಮನ ಹರಿಸಬೇಕು ಎಂದರು.ಬಿಇಒ ಮೋಹನ ದಂಡಿನ ಮಾತನಾಡಿ, ಶಾಲಾ ಮಕ್ಕಳ ಸುರಕ್ಷತೆಗೋಸ್ಕರ ಪಟ್ಟಣದಲ್ಲಿ ಜೂ.18 ಮತ್ತು 19 ರಂದು 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಪೂರ್ಣ ರಜೆ ನೀಡಲಾಗಿದೆ ಎಂದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಗದಗಿನಮಠ, ಸಿಪಿಐ ಧರ್ಮಟ್ಟಿ, ಪುರಸಭೆ ಇಂಜನೀಯರ್ ಪಿ.ಎಸ್.ದಂಡಿನ, ಅಶೋಕ ಮುರಗೋಡ ಹಾಗೂ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.