ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ಹನಮಂತ ರೆಡ್ಡಿ

KannadaprabhaNewsNetwork | Published : Jul 12, 2024 1:38 AM

ಸಾರಾಂಶ

ತಾಲೂಕಿನ ಅರಿಕೇರಾ ಬಿ. ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅಲ್ಲಿಪೂರ ಇವುಗಳ ಸಹಯೋಗದಲ್ಲಿ ವಿಶ್ವ ಜನ ಸಂಖ್ಯೆ ದಿನಾಚಾರಣೆ ಮತ್ತು ಡೆಂಘೀ ಮಾಸಚಾರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಯಾದಗಿರಿ

ತಾಲೂಕಿನ ಅರಿಕೇರಾ ಬಿ. ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅಲ್ಲಿಪೂರ ಇವುಗಳ ಸಹಯೋಗದಲ್ಲಿ ವಿಶ್ವ ಜನ ಸಂಖ್ಯೆ ದಿನಾಚಾರಣೆ ಮತ್ತು ಡೆಂಘೀ ಮಾಸಚಾರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ಹನಮಂತರೆಡ್ಡಿ, ಆರೋಗ್ಯ ಮೇಳದಿಂದ ಸಾರ್ವಜನಿಕರಿಗೆ ತುಂಬಾ ಉಪಯೋಗವಿದೆ. ಮಳೆಗಾಲ ಆರಂಭವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಂಭವವಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮ ತೆಗೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಸಮ್ಮ ಮಾತನಾಡಿ, ಯಾದಗಿರಿ ತಾಲೂಕಿನ ಅಲ್ಲಿಪೂರ ವ್ಯಾಪ್ತಿಯಲ್ಲಿ ಬರುವ ಖಾನಹಳ್ಳಿ ಗ್ರಾಮದ ಜನರು ಆರೋಗ್ಯ ಇಲಾಖೆಯ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಮಾಹಿತಿಯನ್ನು ಪಡೆದುಕೊಳ್ಳಬೇಕು. ಎಲ್ಲಾ ಸಾರ್ವಜನಿಕರು ಆರೋಗ್ಯ ಮೇಳದ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಬೇಕು ಸಲಹೆ ನೀಡಿದರು.

ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಸಾಜೀದ್‌ ಮಾತನಾಡಿ, ಜುಲೈ ತಿಂಗಳಲ್ಲಿ ಡೆಂಘೀ ಮಾಸಾಚರಣೆ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಹಿನ್ನೆಲೆ ಮಳೆಗಾಲ ಆರಂಭವಾಗಿರುವುದರಿಂದ ನೀರಿನಲ್ಲಿ ಈಡೀಸ್, ಇಜಿಪ್ಟೆ ಜಾತಿಯ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತವೆ. ಸೋಂಕಿತ ಸೊಳ್ಳೆಗಳು ಕಚ್ಚುವುದರಿಂದ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮನೆಯ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಪಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಸಂಜೀವ್ ಕುಮಾರ ರಾಯಚೂರಕರ್ ಮಾತನಾಡಿ, ಕ್ಷಯರೋಗ ಸಾಂಕ್ರಾಮಿಕ. ಕ್ಷಯರೋಗಿ ಕೆಮ್ಮುವುದರಿಂದ ಗಾಳಿಯ ಮುಖಾಂತರ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸತತವಾಗಿ 2 ವಾರ ಮೇಲ್ಪಟ್ಟು ಕೆಮ್ಮು, ಜ್ವರ, ರಕ್ತ ಮಿಶ್ರಿತ ಕಫ, ತೂಕ ಕಡಿಮೆ ಹಾಗೂ ಹಸಿವು ಆಗದಿರುವುದು ಕ್ಷಯರೋಗದ ಲಕ್ಷಣಗಳಾಗಿವೆ. ಈ ರೀತಿ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಿ ಕಫ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜೋತಿ ಡಿ. ಕಟ್ಟಿಮನಿ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕಲ್ಯಾಣ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಿರುನಾಟಕದ ಮೂಲಕ ವಿಶ್ವ ಜನ ಸಂಖ್ಯೆ ದಿನದ ಜಾಗೃತಿ ಮೂಡಿಸಲಾಯಿತು. ಹಿರಿಯ ನಾಗರಿಕರಿಗೆ ಉಚಿತ ಕನ್ನಡಕ ಹಾಗೂ ಆನೆಕಾಲು ಪೀಡಿತರಿಗೆ ಎಂ.ಎಂ.ಎ. ಕಿಟ್ ವಿತರಿಸಲಾಯಿತು. ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಮಲ್ಲಪ್ಪ ಕೆ. ಕಾರ್ಯಕ್ರಮದ ನೇತೃತ್ವ ವಹಿಸಿದರು.

ಜ್ಯೋತಿಬಾ ಫುಲೆ ಸಂಸ್ಥೆ ಶಹಾಪುರ ಜಾನಪದ ಕಲಾ ತಂಡದವರಿಂದ ಬೀದಿ ನಾಟಕದ ಮುಖಾಂತರ ಅರಿವು ಮೂಡಿಸಲಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ ನಿರೂಪಿಸಿದರು. ಪ್ರಾರ್ಥನೆ ಗೀತೆಯನ್ನು ಶಾಲಾ ಮಕ್ಕಳಾದ ಸಂಜೀವಿನಿ ಹಾಗೂ ತಂಡದವರು ಹಾಡಿದರು. ಅಲ್ಲಿಪೂರ ಆರೋಗ್ಯ ಕೇಂದ್ರದ ವೆಂಕಟಮ್ಮ ಸ್ವಾಗತಿಸಿದರು. ಆಡಳಿತ ವೈದಾಧಿಕಾರಿ ಡಾ. ಜಗದೀಶ್ ಪಾಟೀಲ್ ಅವರು ವಂದಿಸಿದರು. ಡಾ. ನೀಲಾಂಬಿಕಾ, ಡಾ. ಶೃತಿ, ಡಾ. ಪ್ರಸಾದ್ ಕುಲಕರ್ಣಿ, ಡಾ. ರಶೀದ್, ಡಾ. ಸುನಿತಾ, ಶಾಂತಿಲಾಲ ಇತರರಿದ್ದರು.

Share this article