ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದ ಕೆಲ ಜಿಲ್ಲೆಗಳಲ್ಲಿ 3 ರಿಂದ 6 ದಿನಗಳ ವರೆಗೆ ಬಿಸಿಗಾಳಿಯ ಪ್ರಭಾವ ಕಂಡುಬರುವ ಸಾಧ್ಯತೆಯಿದೆ. ತೀವ್ರ ತಾಪಮಾನವು ಸಾರ್ವಜನಿಕರ ಆರೋಗ್ಯದ ಮೇಲೆ, ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ಪೀಡಿತರ ಮೇಲೆ ಗಂಭೀರ ಪರಿಣಾಮ ಬೀರಬಹುದು. ಬಿಸಿಲಿನಿಂದ ಉಂಟಾಗುವ ಬಳಲಿಕೆ, ನಿರ್ಜಲೀಕರಣ ಮತ್ತು ಹೀಟ್ ಸ್ಟ್ರೋಕ್ ತಡೆಗಟ್ಟಲು ಮತ್ತು ತಗ್ಗಿಸಲು ಸಾರ್ವಜನಿಕರು ಗಮನ ಹರಿಸಬೇಕು ಎಂದವರು ತಿಳಿಸಿದ್ದಾರೆ. ಗರಿಷ್ಠ ತಾಪಮಾನದ ಅವಧಿಯಲ್ಲಿ ಅದರಲ್ಲೂ ಮಧ್ಯಾಹ್ನ 12 ರಿಂದ 3ಗಂಟೆಯವರೆಗೆ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದರು.ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಬೇಕು. ಹಗುರವಾದ, ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಹೊರಗೆ ಹೋಗುವ ಅನಿವಾರ್ಯತೆಯಿದ್ದರೇ ರಕ್ಷಣೆಗಾಗಿ ಕನ್ನಡಕ, ಛತ್ರಿ, ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಬಳಸಬೇಕು. ಹೊರಗಿನ ಉಷ್ಣತೆ ಅಧಿಕವಾಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದರು.ಪೂರ್ವಾಹ್ನ 11 ರಿಂದ ಸಂಜೆ 4 ಗಂಟೆ ಅವಧಿಯಲ್ಲಿ ಹೊರಾಂಗಣ ಸಭೆಗಳು, ಚಟುವಟಿಕೆಗಳು ನಡೆಯುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬಿಸಿಲಿನಿಂದ ರಕ್ಷಣೆ ನೀಡಲು ಅಗತ್ಯ ಶಾಮಿಯಾನ, ಪೆಂಡಾಲ್ ವ್ಯವಸ್ಥೆ ಮಾಡಬೇಕು. ಉತ್ತಮ ಗಾಳಿಯ ವ್ಯವಸ್ಥೆ ಖಚಿತಪಡಿಸಿಕೊಳ್ಳಬೇಕು. ಸಭಿಕರಿಗೆ ಕಡ್ಡಾಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ. ಪ್ರಯಾಣದೊಟ್ಟಿಗೆ ಸಾಕಷ್ಟು ನೀರಿರಲಿ. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಪಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯ ಸೇವಿಸುವುದು ಬೇಡ. ಸಾಧ್ಯವಾದಷ್ಟು ಬಿಸಿ ಆಹಾರವನ್ನು ಸೇವಿಸಬೇಕು ಎಂದು ತಿಳಿಸಿದರು.ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳು ಹಾಗೂ ಸಾಕುಪ್ರಾಣಿಗಳನ್ನು ಬಿಡಬೇಡಿ. ಮೂರ್ಚೆ ಅಥವಾ ಅನಾರೋಗ್ಯ ಎನಿಸಿದರೇ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಒಆರ್‌ಎಸ್ ಸೇವಿಸಬೇಕು. ಹೆಚ್ಚಿನ ನೀರಿನಂಶ ಹೊಂದಿರುವ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ತರಕಾರಿ ಸೊಪ್ಪು, ಎಳೆನೀರು ಹೆಚ್ಚಾಗಿ ಸೇವಿಸಬೇಕು. ಜೊತೆಗೆ ಸಾಕು ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರುಡಿ. ಮನೆ ತಂಪಾಗಿರಿಸಲು ಪರದೆ, ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಬೇಕು. ಹೊರಗೆ ಹೋಗುವಾಗ ನೀರಿನ ಬಾಟಲಿ, ಛತ್ರಿ, ಟೋಪಿ, ಕ್ಯಾಪ್, ಹೆಡ್ ಕವರ್, ಹ್ಯಾಂಡ್ ಟವೆಲ್, ಹ್ಯಾಂಡ್ ಫ್ಯಾನ್, ಎಲೆಕ್ಟೋಲೈಟ್/ಗ್ಲೋಕೋಸ್, ಒಆರ್‌ಎಸ್ ಒಳಗೊಂಡಿರುವ ಕಿಟ್ ಒಯ್ಯಬೇಕು. ಅತಿ ಹೆಚ್ಚು ತಾಪಮಾನದಿಂದ ಸಾಮಾನ್ಯವಾಗಿ ನಿರ್ಜಲೀಕರಣ, ಶಾಖ ಸೆಳೆತ, ಶಾಖದ ಬಳಲಿಕೆ ಅಥವಾ ಶಾಖದ ಅಘಾತದಂತಹ (ಸನ್ ಸ್ಟ್ರೋಕ್) ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ. ತಾಪಮಾನಕ್ಕೆ ತುತ್ತಾದ ವ್ಯಕ್ತಿಯನ್ನು ನೆರಳಿನಡಿ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು. ಒದ್ದೆ ಬಟ್ಟೆಯಿಂದ ಮೈಒರೆಸುವುದು ಹಾಗೂ ದೇಹದ ಉಷ್ಣತೆಯನ್ನು ತಗ್ಗಿಸಲು ತಲೆಯ ಮೇಲೆ ನೀರನ್ನು ಹಾಕಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೋಗ ಲಕ್ಷಣಗಳು ಉಲ್ಬಣಗೊಂಡರೆ ಅಥವಾ ದೀರ್ಘಕಾಲದ ವರೆಗೆ ಇದ್ದರೆ ಅಥವಾ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೇ ವೈದ್ಯರನ್ನು ಸಂಪರ್ಕಿಸಬೇಕು.
ಡಾ.ಆನಂದ.ಕೆ ಜಿಲ್ಲಾಧಿಕಾರಿ.