ಬ್ಯಾಡಗಿ: ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ಡೆಂಘೀ ಜ್ವರ ಉಲ್ಬಣವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಹೇಳಿದರು.
ಮುಂಗಾರು ಮಳೆ ಆರಂಭವಾದ ಪರಿಣಾಮ ಎಲ್ಲೆಡೆ ರೋಗರುಜಿನಗಳು ಹೆಚ್ಚಾಗುತ್ತಿವೆ. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಗ್ರಾಪಂ ಹಾಗೂ ಪುರಸಭೆ ಸಿಬ್ಬಂದಿ ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಫಾಗಿಂಗ್ ಮಾಡುವ ಮೂಲಕ ಸೊಳ್ಳೆಗಳ ನಿಯಂತ್ರಿಸಬೇಕಿದೆ. ಇದಕ್ಕಾಗಿ ಈಗಾಗಲೇ ನಾವು ಎಲ್ಲ ಪಿಡಿಒಗಳಿಗೆ ಖಡಕ್ಕಾಗಿ ಸೂಚಿಸಿದ್ದೇವೆ. ಮೇ ೩೧ರಂದು ತಾಲೂಕಿನ ಎಲ್ಲ ಗ್ರಾಪಂ ಅಧಿಕಾರಿಗಳ ಸಭೆ ನಡೆಸುವ ಮೂಲಕ ಮತ್ತೊಮ್ಮೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ತಿಳಿಸಲಾಗುವುದು. ಡೆಂಘೀ ಹೆಚ್ಚಾದಲ್ಲಿ ಸ್ಥಳೀಯ ಅಧಿಕಾರಿಗಳು ಹೊಣೆ ಹೊರಬೇಕಾಗಲಿದ್ದು, ಎಲ್ಲರೂ ಇಂತಹ ಸಂದರ್ಭದಲ್ಲಿ ಎಚ್ಚೆತ್ತುಕೊಂಡು ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಡೆಂಘೀ ತಡೆಗಟ್ಟುವಲ್ಲಿ ಕೇವಲ ಅಧಿಕಾರಿಗಳ ಪಾತ್ರವೆಂದು ಸಾರ್ವಜನಿಕರು ಕೈಕಟ್ಟಿ ಕುಳಿತುಕೊಳ್ಳಬಾರದು. ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗೆ ಸಹಕರಿಸಬೇಕು ಎಂದರು.ತಾಲೂಕು ವೈದ್ಯಾಧಿಕಾರಿ ಅರಾಫತ್ ಕಾಗದಗಾರ ಮಾತನಾಡಿ, ತಾಲೂಕಿನಾದ್ಯಂತ ಕಳೆದ ಎರಡು ವರ್ಷಗಳಲ್ಲಿ ೭೦ಕ್ಕೂ ಹೆಚ್ಚು ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಆದರೆ ಯಾರೊಬ್ಬರೂ ಬಲಿಯಾಗಿಲ್ಲ. ಶಂಕಿತರೆಂದು ತಿಳಿದ ತಕ್ಷಣ ಅಂತಹ ರೋಗಿಗಳ ರಕ್ತವನ್ನು ತಪಾಸಣೆಗೆ ಕಳುಹಿಸಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ. ಪ್ರತಿದಿನ ೫ರಿಂದ ೧೦ ರೋಗಿಗಳ ರಕ್ತ ಮಾದರಿಯನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿದ್ದೇವೆ. ಈಗಾಗಲೇ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಖುದ್ದಾಗಿ ತೆರಳಿ ಪರಿಸ್ಥಿತಿ ಪರಿಶೀಲನೆ ನಡೆಸಿರುವೆ. ಅಧಿಕಾರಿಗಳಿಗೆ ತಕ್ಷಣ ಜಾಗೃತಿಗೆ ಸೂಚನೆ ನೀಡಿರುವೆ. ಇದಕ್ಕೆ ಎಲ್ಲ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.
ತಹಸೀಲ್ದಾರ್ ಪಟ್ಟರಾಜ, ಡೆಂಘೀ ಜ್ವರ ನಿಯಂತ್ರಣಾಧಿಕಾರಿ ಡಾ. ಸರಿತಾ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಇದ್ದರು.
ಬ್ಯಾಡಗಿ ತಾಲೂಕಿನಾದ್ಯಂತ ಡೆಂಘೀ ಉಲ್ಬಣಗೊಂಡಿದ್ದು, ಚಿಕ್ಕಬಾಸೂರು ಗ್ರಾಮದ ಬಾಲಕಿಯೊಬ್ಬಳು ಶಂಕಿತ ಡೆಂಘೀ ಜ್ವರಕ್ಕೆ ಬಲಿಯಾದ ಘಟನೆ ಸೋಮವಾರ ಜರುಗಿದೆ.ತಾಲೂಕಿನ ಚಿಕ್ಕಬಾಸೂರು ಗ್ರಾಮದ ಅನುರಾಧಾ ಪಂಚಾನನ (೧೫) ಮೃತಪಟ್ಟ ಬಾಲಕಿ.೪ ದಿನಗಳ ಹಿಂದೆ ಶಂಕಿತ ಡೆಂಘೀ ಜ್ವರ ಕಾಣಿಸಿಕೊಂಡಿತ್ತು. ಮೇ ೨೬ರಂದು ಬಾಲಕಿಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ಕಳುಹಿಸಲಾಗಿತ್ತು. ಅಲ್ಲಿ ಸೋಮವಾರ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.