ಕುಡಿವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಿ: ಶಾಸಕ ರಾಜಾ ವೆಂಕಟಪ್ಪ ನಾಯಕ

KannadaprabhaNewsNetwork | Published : Jan 22, 2024 2:17 AM

ಸಾರಾಂಶ

ಸುರಪುರ ಮತ್ತು ಹುಣಸಗಿ ಈ ಎರಡು ತಾಲೂಕು ತಹಸೀಲ್ದಾರರು, ಕಂದಾಯ ಇಲಾಖೆಯವರು, ಗ್ರಾಮೀಣ ಕುಡಿಯುವ ನೀರು, ಪಶು ಸಂಗೋಪನೆ, ಕೃಷಿ, ತೋಟಗಾರಿಕೆ ಸೇರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಬೋರವೆಲ್ ಕೊರೆಸಬೇಕು. ಸಮಸ್ಯೆ ತೀವ್ರವಾಗಿದ್ದರೆ ಟ್ಯಾಂಕ್‌ರ್‌ ಮೂಲಕ ನೀರು ಸರಬರಾಜು ಮಾಡಬೇಕು.

ಕನ್ನಡಪ್ರಭ ವಾರ್ತೆ ಸುರಪುರ

ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಗಮನಹರಿಸಿ, ಎಲ್ಲ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಸೂಚನೆ ನೀಡಿದರು.

ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಜರುಗಿದ ಬೇಸಿಗೆ ಕುಡಿಯುವ ನೀರಿನ ಟಾಸ್ಕ್ ಫೋರ್ಸ್ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದ ಯಾವುದೇ ಒಂದು ಗ್ರಾಮದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗಬಾರದು. ಕಾರಣ ಬೇಸಿಗೆ ಪೂರ್ವದಲ್ಲೇ ಎಲ್ಲ ರೀತಿ ಕ್ರಮಗಳನ್ನು ಕೈಗೊಳ್ಳುವಂತೆ ತಾಕೀತು ಮಾಡಿದರು.

ಸುರಪುರ ಮತ್ತು ಹುಣಸಗಿ ಈ ಎರಡು ತಾಲೂಕು ತಹಸೀಲ್ದಾರರು, ಕಂದಾಯ ಇಲಾಖೆಯವರು, ಗ್ರಾಮೀಣ ಕುಡಿಯುವ ನೀರು, ಪಶು ಸಂಗೋಪನೆ, ಕೃಷಿ, ತೋಟಗಾರಿಕೆ ಸೇರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಬೋರವೆಲ್ ಕೊರೆಸಬೇಕು. ಸಮಸ್ಯೆ ತೀವ್ರವಾಗಿದ್ದರೆ ಟ್ಯಾಂಕ್‌ರ್‌ ಮೂಲಕ ನೀರು ಸರಬರಾಜು ಮಾಡಬೇಕು. ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಕೂಡದು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಎಲ್ಲರೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸುರಪುರ ತಹಸೀಲ್ದಾರ್ ಕೆ.ವಿಜಯಕುಮಾರ, ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ಹುಣಸಗಿ ಬಸವರಾಜಸ್ವಾಮಿ ಹಿರೇಮಠ ಸಭೆಯಲ್ಲಿ ಮಾತನಾಡಿದರು. ಎಚ್.ಡಿ. ಪಾಟೀಲ್ ಮಾತನಾಡಿ, ಕ್ಷೇತ್ರದಲ್ಲಿ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು, ಇಲಾಖೆ ಕೈಗೊಂಡ ಕ್ರಮಗಳು, ಮುಂದಿನ ದಿನಗಳ ಸಿದ್ಧತೆಗಳ ಬಗ್ಗೆ ವಿವರಿಸಿದರು.

ಸುರಪುರ ನಗರಸಭೆ, ಹುಣಸಗಿ ಪಟ್ಟಣ ಪಂಚಾಯಿತಿ ಮತ್ತು ಕಕ್ಕೇರಾ ಪುರಸಭೆ ಅಧಿಕಾರಿಗಳು ಮಾತನಾಡಿ, ನಮಲ್ಲಿಯೂ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುರೇಶ್ ಹಚ್ಚಡ ಮಾತನಾಡಿ, ಕ್ಷೇತ್ರದಲ್ಲಿ ಮೇವಿನ ಸಮಸ್ಯೆ ಇಲ್ಲ. ಪಶುಗಳಿಗಾಗಿ ಆರೋಗ್ಯ ಶಿಬಿರ ಮಾಡಲಾಗಿದೆ. ಗೋಶಾಲೆ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಸುರಪುರ ಮತ್ತು ಹುಣಸಗಿ ತಾಲೂಕು ವಿವಿಧ ಇಲಾಖೆ ಅಧಿಕಾರಿಗಳು, ಕೃಷಿ ಇಲಾಖೆ ಎಡಿ ಭೀಮರಾಯನಾಯಕ ಹವಲ್ದಾರ್, ಕಂದಾಯ ಇಲಾಖೆಯವರು, ಎಂಜನಿಯರ್‌ಗಳು ಇದ್ದರು.

ಕ್ಷೇತ್ರದಲ್ಲಿ ಸದ್ಯ ನೀರಿನ ಸಮಸ್ಯೆ ಇಲ್ಲ: ಕ್ಷೇತ್ರದಲ್ಲಿ ಎಲ್ಲಿಯೂ ಸದ್ಯ ನೀರಿನ ಸಮಸ್ಯೆ ಇಲ್ಲ. ಸಣ್ಣ ಚಾಪಿ ತಾಂಡಾ, ದೊಡ್ಡ ಚಾಪಿ ತಾಂಡಾ, ಮಾರಲಬಾವಿ, ಕೋಳಿಹಾಳ, ಯಕ್ತಾಪುರ, ಅಮಲಿಹಾಳ ಇನ್ನಿತರ ಕಡೆಗಳಲ್ಲಿ ಮುಂಬರುವ ತಿಂಗಳಲ್ಲಿ ನೀರಿನ ಸಮಸ್ಯೆ ಬರಬಹುದು ಎಂದು ಶಾಸಕ ಆರ್‌ವಿಎನ್ ತಹಸೀಲ್ ಕಚೇರಿಯಲ್ಲಿ ಸುದ್ದಿಗಾರರಿಗೆ ಹೇಳಿದರು.

ಆ ನಿಟ್ಟಿನಲ್ಲಿ ಸಮಸ್ಯೆ ಹೋಗಲಾಡಿಸಲು ಈಗಿನಿಂದಲೇ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಆಯಾ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸುರಪುರ, ಹುಣಸಗಿ, ಕಕ್ಕೇರಾದಲ್ಲಿಯು ತೊಂದರೆ ಇಲ್ಲ. ಹುಣಸಗಿ, ಕಕ್ಕೇರಾಗಳಲ್ಲಿ ಅರ್ಬನ್ ವಾಟರ್ ಸಪ್ಲೈ ಕಾಮಗಾರಿ ಬೇಗ ಆರಂಭಿಸುವಂತೆ ಹೇಳಲಾಗಿದೆ. ಸುರಪುರ ನಗರಕ್ಕೆ ಕಂಪಾಪುರದಿಂದ ನೀರು ಪೂರೈಕೆಯಾಗುತ್ತದೆ. ಅಲ್ಲಿಯೂ ಬೇಸಿಗೆ ಕಾಲದಲ್ಲಿ ನೀರಿನ ಕೊರತೆಯಾದರೆ ಉಸುಕಿನ ಚೀಲಗಳ ರಿಂಗ್ ಬಾಂಡ್ ನಿರ್ಮಿಸುವುದರ ಮೂಲಕ ನೀರು ತಡೆದು ನಗರಕ್ಕೆ ಸಮರ್ಪಕವಾಗಿ ನೀರು ಪೂರೈಸುವಂತೆ ಕೆಲಸ ಮಾಡಿ ಎಂದು ನಗರಸಭೆ ಅಧಿಕಾರಿಗಳಿಗೆ ಹೇಳಲಾಗಿದೆ ಎಂದು ಅವರು ಹೇಳಿದರು.

Share this article