ಹಾವೇರಿ: ಸಮುದಾಯ ಮಟ್ಟದಲ್ಲಿ ಡೆಂಘೀ ಜ್ವರ ನಿಯಂತ್ರಣ ಹಾಗೂ ಮುಂತಾದ ಸಾಂಕ್ರಾಮಿಕ ರೋಗಗಳ ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಿ ಜಾಗೃತಿ ಮೂಡಿಸುವಲ್ಲಿ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹಾವೇರಿ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಎಸ್. ಕುಂದೂರ ಹೇಳಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಡೆಂಘೀ ದಿನ ಅಂಗವಾಗಿ ತಾಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆಯೋಜಿಸಲಾದ ಅಡ್ವೂಕೆಸಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕೀಟ ಶಾಸ್ತ್ರಜ್ಞ ಶ್ರೀಕಾಂತ ಮಾತನಾಡಿ, ಸೊಳ್ಳೆಗಳಿಂದ ಹರಡುವ (ಕೀಟ ಜನ್ಯ ರೋಗಗಳು )ರೋಗಗಳಾದ ಮಲೇರಿಯಾ, ಡೆಂಘೀ, ಚಿಕ್ಯೂನ್‌ಗುನ್ಯ, ಆನೆಕಾಲು ರೋಗ, ಮೆದುಳು ಜ್ವರದ ಬಗ್ಗೆ ಹಾಗೂ ಸೊಳ್ಳೆಗಳ ಉತ್ಪತ್ತಿ, ಸೊಳ್ಳೆಯ ಜೀವನದ ಹಂತಗಳ ಕುರಿತು ಮಾಹಿತಿ ನೀಡಿದರು.ಪ್ರಸ್ತುತ ದಿನಗಳಲ್ಲಿ ಮಳೆಯ ಅಭಾವದ ಕಾರಣ ಸಾರ್ವಜನಿಕರು ತಮ್ಮ ಮನೆಗಳಲ್ಲಿ ನೀರಿನ ಸಂಗ್ರಹಣೆ ಮಾಡುವುದು ಸಾಮಾನ್ಯವಾಗಿದೆ. ಸಂಗ್ರಹಿಸಿದ ನೀರಿನಲ್ಲಿ ಸ್ವಲ್ಪ ದಿನಗಳ ನಂತರ ಲಾರ್ವ ಹುಳುಗಳು ಜನಿಸಿ ಸೊಳ್ಳೆಗಳಾಗಿರುವುದರಿಂದ ಕೀಟ ಜನ್ಯ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಈ ವರ್ಷ ತಾಲೂಕಿನಲ್ಲಿ ಒಟ್ಟು ೧೦ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಈ ರೋಗಿಗಳು ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿರುತ್ತಾರೆ ಎಂದರು. ಮುಂಜಾಗ್ರತವಾಗಿ ಗ್ರಾಮಗಳಲ್ಲಿ ನೀರನ್ನು ಸಂಗ್ರಹಣಾ ತೊಟ್ಟಿಗಳನ್ನು ಶುಚಿಗೊಳಿಸಿ ಒಣಗಿಸಿದ ನಂತರ ನೀರು ಸಂಗ್ರಹಿಸಬೇಕು. ಮನೆಗಳಲ್ಲಿ ಸೊಳ್ಳೆ ಪರದೆ ಬಳಸಬೇಕು, ಮೈತುಂಬ ಬಟ್ಟೆ ಧರಿಸಬೇಕು, ರೋಗದ ಲಕ್ಷಣ ಕಂಡುಬಂದಲ್ಲಿ ತತ್‌ಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆರೋಗ್ಯ ಶಿಕ್ಷಣ ನೀಡಬೇಕು ಎಂದು ಹೇಳಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ನೀರು ನೀಲ್ಲದೇ ಇರುವ ಹಾಗೆ ನೋಡಿಕೊಳ್ಳಬೇಕು. ಈ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಿಂದ ದ್ರಾವಣವನ್ನು ಪಡೆದುಕೊಂಡು ಫಾಗಿಂಗ್ ಮಾಡಿಸಲು ತಿಳಿಸಿದರು. ಚಂದ್ರಶೇಖರ ಹಿತ್ತಲಮನಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅಮೃತಗೌಡ ಪಾಟೀಲ ಮಾತನಾಡಿ, ಶುದ್ಧ ನೀರು ಕುಡಿಯುವ ಘಟಕಗಳ ನೀರನ್ನು ಪಡೆದುಕೊಂಡು ಜೈವಿಕ ವಿಧಾನ ಎಚ್.ಟು.ಎಸ್ ನೀರನ್ನು ಪರೀಕ್ಷೆಗೆ ಸಲ್ಲಿಸಬೇಕು. ವರದಿಯಲ್ಲಿ ನೀರು ಯೋಗ್ಯ ಇರದೇ ಇದ್ದರೆ ಅಂತಹ ಘಟಕಗಳನ್ನು ದುರಸ್ತಿಗೊಳಿಸಬೇಕು ಹಾಗೂ ಗ್ರಾಮಗಳ ನೀರಿನ ಟ್ಯಾಂಕ್‌ಗಳಲ್ಲಿ ಕ್ಲೋರಿನೇಶನ್ ಮಾಡಿದ ನೀರನ್ನು ಸಾರ್ವಜನಿಕರಿಗೆ ಪೂರೈಸಬೇಕು ಎಂದರು.ತಾ.ಪಂ.ಸಹಾಯಕ ನಿರ್ದೇಶಕ ಸಂದೀಪ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆ ಅಧೀಕ್ಷಕ ಎಸ್. ಎಫ್ ಸಾಬಳದ ಹಾಗೂ ತಾಲೂಕಿನ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಪ್ಪ ಕನ್ನಮ್ಮನವರ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಆರೋಗ್ಯ ನಿರೀಕ್ಷಕ ಎ.ಪಿ. ಪಾಟೀಲ ವಂದಿಸಿದರು.