ಕುಕ್ಕೆಯಲ್ಲಿ ಧಾರಾಕಾರ ಮಳೆ: ಹೊಳೆಯಂತಾದ ರಸ್ತೆಗಳು

KannadaprabhaNewsNetwork | Updated : May 31 2024, 12:33 PM IST

ಸಾರಾಂಶ

ಧಾರಕಾರ ಮಳೆಗೆ ಸುಬ್ರಹ್ಮಣ್ಯ-ಗುತ್ತಿಗಾರು-ಸುಳ್ಯ ರಸ್ತೆ ಹಾಗೂ ಸುಬ್ರಹ್ಮಣ್ಯ-ಪಂಜ-ಬೆಳ್ಳಾರೆ ರಸ್ತೆಯ ಹಲವೆಡೆ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಮಳೆ ನೀರು ಬಾರೀ ಪ್ರಮಾಣದಲ್ಲಿ ರಸ್ತೆಯಲ್ಲೇ ಹರಿದು ಹೊಳೆಯಂತಾಗಿತ್ತು.

 ಸುಬ್ರಹ್ಮಣ್ಯ :  ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಗುರುವಾರ ಅಪರಾಹ್ನ ಧಾರಕಾರ ಮಳೆಯಾಗಿದ್ದು, ಬಾರಿ ಮಳೆಯಿಂದಾಗಿ ರಸ್ತೆಯಲ್ಲೇ ಮಳೆ ನೀರು ಹರಿದು ಹೊಳೆಯಂತಾಗಿತ್ತು.

ಬೆಳಗ್ಗೆಯಿಂದ ಮಧ್ಯಾಹ್ನ ವರೆಗೆ ಬಿಸಿಲಿನಿಂದ ಕೂಡಿದ್ದ ಸುಬ್ರಹ್ಮಣ್ಯ ಪರಿಸರದಲ್ಲಿ ಮಧ್ಯಾಹ್ನ ಬಳಿಕ ಮಳೆ ಆರಂಭವಾಗಿದ್ದು, ಸಂಜೆ ವರೆಗೂ ಮುಂದುವರಿಯಿತು. ಧಾರಕಾರ ಮಳೆಗೆ ಸುಬ್ರಹ್ಮಣ್ಯ-ಗುತ್ತಿಗಾರು-ಸುಳ್ಯ ರಸ್ತೆ ಹಾಗೂ ಸುಬ್ರಹ್ಮಣ್ಯ-ಪಂಜ-ಬೆಳ್ಳಾರೆ ರಸ್ತೆಯ ಹಲವೆಡೆ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಮಳೆ ನೀರು ಬಾರೀ ಪ್ರಮಾಣದಲ್ಲಿ ರಸ್ತೆಯಲ್ಲೇ ಹರಿದು ಹೊಳೆಯಂತಾಗಿತ್ತು. ಪರಿಣಾಮ ವಾಹನ ಸವಾರರು ಸಮಸ್ಯೆ ಅನುಭವಿಸಿದರು. 

ಸುಬ್ರಹ್ಮಣ್ಯ, ಬಿಳಿನೆಲೆ, ಯೇನೆಕಲ್ಲು, ಬಳ್ಪ, ಪಂಜ, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಗುತ್ತಿಗಾರು, ನಡುಗಲ್ಲು, ಎಲಿಮಲೆ, ಸಂಪಾಜೆ ಸೇರಿದಂತೆ ವಿವಿಧೆಡೆ ಧಾರಕಾರ ಮಳೆಯಾಗಿದೆ. ಸುಬ್ರಹ್ಮಣ್ಯದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದ ಘಟನೆಯೂ ನಡೆದಿದೆ. ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ಬಳಿ ಚರಂಡಿ ಸಮಸ್ಯೆಯಿಂದ ಮಳೆ ನೀರು ಅಂಗಡಿಗಳಿಗೆ ನುಗ್ಗಿದ ಘಟನೆ ನಡೆದಿದೆ. ಇಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ದೇವಳದ ಆನೆಯನ್ನು ನಡೆಸಿಕೊಂಡು ಬರುವ ವಿಡಿಯೋ ವೈರಲ್‌ ಅಗಿದೆ. ನೂಚಿಲ ಎಂಬಲ್ಲಿ ಮನೆಯ ಅವರಣ ಗೋಡೆ ಕುಸಿದ ಘಟನೆ ಸಂಭವಿಸಿದೆ.ಹೊಳೆಯಲ್ಲಿ ನೀರಿನ ಹರಿವು ಹೆಚ್ಚಳ:

ಧಾರಕಾರ ಮಳೆಯಿಂದ ಹರಿಹರ ಪಲ್ಲತ್ತಡ್ಕದ ಹೊಳೆ, ದರ್ಪಣ ತೀರ್ಥ ಸೇರಿದಂತೆ ಸಣ್ಣ ಪುಟ್ಟ ಹೊಳೆಗಳಲ್ಲಿ ನೀರಿನ ಹರಿವು ಜಾಸ್ತಿಯಾಗಿತ್ತು. ಸಂಜೆ ವೆರೆಗೂ ಸುರಿದ ಮಳೆಯಿಂದ ಕಡಿಮೆ ಪ್ರಮಾಣದಲ್ಲಿದ್ದ ಹೊಳೆಯ ನೀರಿನ ಹರಿವು ಬಾರೀ ಹೆಚ್ಚಳದೊಂದಿದೆ ಹರಿದಿದೆ. 

Share this article