ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಶನಿವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಇತ್ತೀಚೆಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಸಮಯದಲ್ಲಿ ಸಂಭವಿಸಿದ ತಾಯಿ, ಮಗು ಸಾವಿನ ವರದಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಆಸ್ಪತ್ರೆಗಳಿಗೆ ಮಹಿಳೆಯರು ಹೆರಿಗೆಗೆ ದಾಖಲಾದಾಗ ತಾಯಿ ಮತ್ತು ಮಗುವನ್ನು ಜೀವಂತ ಉಳಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಯಾವುದೇ ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕರು ನಿರ್ಲಕ್ಷ್ಯ ವಹಿಸಬಾರದು. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಮರುಕಳಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.ಅಪೌಷ್ಠಿಕತೆ ಹಾಗೂ ರಕ್ತಹೀನತೆ ಹೆರಿಗೆ ಸಮಯದಲ್ಲಿ ತಾಯಿ, ಮಗುವಿನ ಮರಣಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ವೈದ್ಯರು ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿರುವ ತಾಯಿ, ಶಿಶು ಮರಣ ವರದಿಗಳನ್ನು ಪರಿಶೀಲಿಸಬೇಕು. ಪ್ರಕರಣಗಳು ಸಂಭವಿಸದಂತೆ ತಡೆಯುವ ನಿಟ್ಟಿನಲ್ಲಿ ಅರಿವು ಉಂಟುಮಾಡಲು ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಹೆರಿಗೆಗೆ ದಾಖಲಾಗುವವರ ಆಧಾರ್ ಕಾರ್ಡ್‌ನಲ್ಲಿರುವ ಜನ್ಮದಿನಾಂಕವನ್ನು ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿ ಆಹಾರ ದಾಸ್ತಾನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಮಕ್ಕಳ ಹಾಜರಾತಿ ಕ್ರಮಬದ್ಧವಾಗಿರಬೇಕು. ಗುಣಮಟ್ಟದ ಆಹಾರ ನೀಡಬೇಕು. ನಿಲಯ ಪಾಲಕರು ಮಕ್ಕಳ ಉಸ್ತುವಾರಿ ಬಗ್ಗೆ ಸಂಪೂರ್ಣ ನಿಗಾ ವಹಿಸಬೇಕು. ಯಾವುದೇ ಅವ್ಯವಸ್ಥೆಗೆ ಅಸ್ಪದವಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದಡಿ ನೀಡಲಾಗುವ ಬಾಳೆಹಣ್ಣನ್ನು ನೇರವಾಗಿ ರೈತರಿಂದಲೇ ಖರೀದಿಸುವ ವ್ಯವಸ್ಥೆಯಾಗಬೇಕು. ಹೈನುಗಾರಿಕೆ ಉತ್ತೇಜಿಸಿ ಹಾಲು ಉತ್ಪಾದನೆ ಹೆಚ್ಚಳ ಮಾಡುವುದರಿಂದ ಹೈನುಗಾರಿಕೆ ಅವಲಂಬಿತರಿಗೆ ಹೆಚ್ಚಿನ ಆದಾಯ ಬರಲಿದೆ. ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಲಭಿಸಬೇಕು. ಗ್ರಾಮೀಣ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಬೇಕು. ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿರುವವರಿಗೆ ತ್ವರಿತವಾಗಿ ಸಾಲ ನೀಡುವ ಪ್ರಕ್ರಿಯೆಗೆ ಕಾರ್ಯಕ್ರಮ ರೂಪಿಸಬೇಕು ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪಕಾರ್ಯದರ್ಶಿ ಶೃತಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಎಲ್ಲಾ ತಾಲೂಕುಗಳ ತಹಶೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.