ಕನ್ನಡಪ್ರಭ ವಾರ್ತೆ ಕುಷ್ಟಗಿ
ಅಂಗೈಯಲ್ಲಿನ ಗೆರೆಗಳು ಕಾಣಿಸದೆ ಹೋದಾಗ ಕಣ್ಣಿನ ದೃಷ್ಟಿ ಸಾಮರ್ಥ್ಯ ಕಡಿಮೆಯಾಗಿರುತ್ತದೆ ಮತ್ತು ಕಣ್ಣಿಗೆ ಪೊರೆ ಬರಲಾರಂಬಿಸುತ್ತವೆ. ಆಗ ಮುನ್ನೆಚ್ಚರಿಕೆ ಕ್ರಮವಹಿಸಿ ನೇತ್ರ ತಜ್ಞರನ್ನು ಸಂಪರ್ಕಿಸಿ ಕನ್ನಡಕ ಇಲ್ಲವೇ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಎಸ್. ರೆಡ್ಡಿ ಸಲಹೆ ನೀಡಿದರು.ಪಟ್ಟಣದ ತಾಪಂಯಲ್ಲಿರುವ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಸಮಾಲೋಚನಾ ಕೇಂದ್ರದಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕುಡುಮಶ್ರೀ 4ಜಿ ದಿವ್ಯಾಂಗರ ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಹಿರಿಯ ನಾಗರಿಕರ ಕಣ್ಣಿನ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.ಹಿರಿಯ ನಾಗರಿಕರು ವಯೋಸಹಜವಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಇದರ ಜೊತೆಗೆ ಕಣ್ಣಿನ ದೃಷ್ಟಿಗಳು ಸಹ ಕಡಿಮೆಯಾಗುತ್ತಾ ಹೋಗುವ ಪರಿಣಾಮ ಇನ್ನೊಬ್ಬರ ಮೇಲೆ ಅವಲಂಬನೆಯಾಗಬೇಕಾಗುತ್ತದೆ. ಆದ ಕಾರಣ ಸಮರ್ಪಕವಾದ ಚಿಕಿತ್ಸೆಗೆ ಮುಂದಾಗಬೇಕು ಎಂದರು.
ಕುಡುಮಶ್ರೀ 4ಜಿ ಸಂಸ್ಥೆಯ ಅಧ್ಯಕ್ಷ ಕಿರಣ ಜ್ಯೋತಿ ಮಾತನಾಡಿ, ಹಿರಿಯ ನಾಗರಿಕರು ಸಮಾಜದ ಆಸ್ತಿ, ಕುಟುಂಬದ ಮುಂದಿನ ಪೀಳಿಗೆಗೆ ಸಂಸ್ಕಾರದ ಕೊಡುಗೆಗಾಗಿ ಹಿರಿಯ ನಾಗರಿಕರ ಪಾತ್ರ ಪ್ರಮುಖವಾಗಿದೆ ಎಂದರು.ಎಂ.ಆರ್.ಡಬ್ಲೂ ಚಂದ್ರಶೇಖರ ಹಿರೇಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೊಪ್ಪಳದ ಲಯನ್ಸ್ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ಮನೋಹರ ಪತ್ತಾರ 35 ಹಿರಿಯ ನಾಗರಿಕರ ಕಣ್ಣಿನ ತಪಾಸಣೆ ಮಾಡಿದರು, ಆ ಪೈಕಿ 16 ಜನರಿಗೆ ಕಣ್ಣಿನ ಪೊರೆಯ ಬಂದಿದ್ದು, 19 ಜನರಿಗೆ ಕನ್ನಡಕ ಮತ್ತು ಕಣ್ಣಿನ ಸಂರಕ್ಷಣಾ ಕ್ರಮಗಳ ಬಗ್ಗೆ ತಿಳುವಳಿಕೆ ಮೂಡಿಸಿದರು.ವಿ ಆರ್.ಡಬ್ಲ್ಯೂ ಆದಪ್ಪ ಮಾಲೀಪಾಟೀಲ್ ನಿರೂಪಿಸಿದರು. ಬಸವರಾಜ್ ಗಾಣಿಗೇರ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭ ಬಾಲಾಜಿ ಬಳಿಗಾರ ಸೇರಿದಂತೆ ಹಿರಿಯ ನಾಗರಿಕರು ಹಾಜರಿದ್ದರು.